ನ್ಯಾಮತಿ: ತಾಲೂಕಿನ ಬಸವನಹಳ್ಳಿ ಸಮೀಪ ಹರಿಯುವ ತುಂಗಾ ನಾಲೆಯ ದಂಡೆ ಒಡೆದಿರುವ ಸ್ಥಳಕ್ಕೆ ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ, ವರದಿ ಪಡೆದು ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನೀರಿನ ಹರಿವು ನಿಂತ ನಂತರ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹತ್ತರಿಂದ ಹದಿನೈದು ದಿನದೊಳಗೆ ನಾಲೆ ಬದು ನಿರ್ಮಿಸಿ, ಬೆಳೆಗೆ ನೀರು ಕೊಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನ್ಯಾಮತಿ ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ ಗೋವಿನಕೋವಿ, ಉಪ ತಹಸೀಲ್ದಾರ್ ಸವಿತಾ, ಆರ್‌ಐ ಸಂತೋಷ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಎ.ಎಸ್.ಪ್ರತಿಮಾ, ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ, ನೀರಾವರಿ ಇಲಾಖೆಯ ಇಂಜಿನಿಯರ್, ರೈತರು ಇದ್ದರು.