ಜಿಲ್ಲೆ

ದೇಶದ ಪ್ರಗತಿಗೆ ವಿದ್ಯಾರ್ಥಿಗಳ ಪಾತ್ರ ಮುಖ್ಯ

Davangere - Desk - Basavaraja P

ಶಾಸಕ ಡಿ.ಜಿ ಶಾಂತನಗೌಡ ಅಭಿಪ್ರಾಯ I ಕೊಡತಾಳು ಗ್ರಾಮದಲ್ಲಿ ಎನ್ನೆಸ್ಸೆಸ್ ಶಿಬಿರ

ನ್ಯಾಮತಿ: ದೇಶದ ಪ್ರಗತಿಗೆ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ ಎಂದು ಶಾಸಕ ಡಿ.ಜಿ ಶಾಂತನಗೌಡ ಹೇಳಿದರು.

ತಾಲೂಕಿನ ಕೊಡತಾಳು ಗ್ರಾಮದಲ್ಲಿ ಇತ್ತೀಚೆಗೆ ಸವಳಂಗ ಗ್ರಾಮದ ಸರ್ಕಾರಿ ಪಿಯು ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ, ಮಾತನಾಡಿದರು.

ಕಲಿಕೆಯ ವೇಳೆ ವಿದ್ಯಾರ್ಥಿಗಳಿಗೆ ವಿದ್ಯೆಯೇ ಮುಖ್ಯ ಗುರಿಯಾಗಬಾರದು. ಯುವಕರ ಪರಿಶ್ರಮ ಸಮಾಜಕ್ಕೆ ನೀಡಿದಾಗ ಮಾತ್ರ ಸಾರ್ಥಕತೆ ಬರುತ್ತದೆ. ಶಿಬಿರಗಳಿಂದ ಅವಿಸ್ಮರಣೀಯ ಘಟನೆಗಳಿಗೆ ಕಾರಣವಾಗುವ ಸೇವೆ ಮಾಡಬೇಕು ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆಯಂಥ ಶಿಬಿರಗಳು ಹಳ್ಳಿಗಳ ಉದ್ಧಾರಕ್ಕೆ ನೆರವಾಗಲಿವೆ. ಸಮಾಜಮುಖಿ ಕೆಲಸಗಳೊಂದಿಗೆ ದೇಶಿಯ ಸಂಸ್ಕೃತಿ ಮತ್ತು ಸಂಪ್ರದಾಯ ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು.

ಚಿತ್ರನಟ ಚೇತನ್ ಸಿ. ರಾಯನಹಳ್ಳಿ ಮಾತನಾಡಿ, ಯುವಕರು ಪುಸ್ತಕವನ್ನು ಪ್ರೀತಿಸಬೇಕು. ವಿದ್ಯಾರ್ಥಿ ದಿಸೆಯ ಅವಧಿಯನ್ನು ಕಾಲಹರಣ ಮಾಡಬಾರದು. ಎಲ್ಲರಲ್ಲೂ ಸಮನ್ವಯ, ಸಾಮರಸ್ಯದ ಮನೋಭಾವ ಬೆಳೆಯಬೇಕಾದ ಅವಶ್ಯಕತೆ ಇದೆ ಎಂದರು.

ಪ್ರಾಚಾರ್ಯ ಎಚ್.ಎಸ್. ಕೋದಂಡ, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಕಿರಣ್‌ಕುಮಾರ್ ಮಾತನಾಡಿದರು.

ಗ್ರಾಪಂ ಸದಸ್ಯೆ ಎಂ.ಜಿ. ವಸಂತ ಕೊಡತಾಳು, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರುದ್ರೇಶಪ್ಪ ಕೊಡತಾಳು, ಸದಸ್ಯರಾದ ಗಿರೀಶ ಸವಳಂಗ, ನಾಗರಾಜು ಸೋಗಿಲು, ನಾಗರಾಜ ಮಾಸ್ಟರ್, ಹಾಲೇಶನಾಯ್ಕ, ಉಪನ್ಯಾಸಕರಾದ ಚಿತ್ತರಂಜನ್, ಬಸವರಾಜ್, ಬಾಳೇರ್ ಸುಬ್ರಹ್ಮಣ್ಯ ಇತರರಿದ್ದರು.