ಜಿಲ್ಲೆ

ಗಣೇಶ’ನಿಂದ ಹಸನಾದೀತೆ ಕುಂಬಾರರ ಬಾಳು; ಪ್ರಥಮ ಪೂಜಿತನ ಹಬ್ಬಕ್ಕೆ ಬೀಳದಿರಲಿ ಕರೊನಾ ನೆರಳು

Chitradurga

ಷಣ್ಮುಖ.ಬಿ.ಈ ನ್ಯಾಮತಿ.

ಸರ್ವ ಕೆಲಸ-ಕಾರ್ಯಕ್ಕೂ ಮೊದಲು ಗಣೇಶ, ವಿನಾಯಕ, ವಿಘ್ನ ನಿವಾರಕ ಎಂದೆಲ್ಲ ಸ್ತುತಿಸುವ ಗಣಪತಿ ಮೊದಲೊಂದೀಪಿತ ದೇವ. ಶ್ರಾವಣ ಮಾಸದಲ್ಲಿ ಗಣೇಶ ಚತುರ್ಥಿ ಎಂದರೆ ಎಲ್ಲಿಲ್ಲದ ಸಂಭ್ರಮ.

ಪಾರ್ವತಿ ಪ್ರಿಯಸುತನಿಗೆ ಭಾರತದಾತ್ಯಂತ ಗಲ್ಲಿ ಗಲ್ಲಿ, ಶಾಲೆ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಭಕ್ತಿ-ಭಾವದ ಪೂಜೆ, ಅದ್ಧೂರಿ ಮೆರವಣಿಗೆ ಸಲ್ಲುತ್ತದೆ. ಪೌರಾಣಿಕ ಹಿನ್ನೆಲೆಯೂ ಇರುವ ಗಣೇಶ ಹಬ್ಬ ಸ್ವಾತಂತ್ರ್ಯಕ್ಕಾಗಿ ಜನರನ್ನು ಒಗ್ಗೂಡಿಸಲು ಅಂದು ಒಂದು ಜನಾಂದೋಲನ, ಅಲೆಯಾಗಿ ಮಾರ್ಪಟ್ಟಿತು ಎಂಬ ಹಿರಿಮೆಗೂ ಪಾತ್ರವಾಗಿದೆ.

ಮೂರ್ತಿ ತಯಾರಕರಿಗೆ ಕರೊನಾ ಸಂಕಷ್ಟ: ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ಕಳೆದೆರಡು ವರ್ಷಗಳಿಂದ ಸರ್ಕಾರ ಗಣೇಶ ಚತುರ್ಥಿ ವೇಳೆ ಕೈಗೊಂಡ ನಿಯಮಾವಳಿ ವಿಗ್ರಹ ತಯಾರಕರಿಗೆ ಸಂಕಷ್ಟವಾಗಿ ಪರಿಣಮಿಸಿತ್ತು. ಚಿಕ್ಕ ಚಿಕ್ಕ ಮೂರ್ತಿಗಳನ್ನಷ್ಟೇ ಸಿದ್ಧಪಡಿಸಿ ಅರ್ಧದಷ್ಟೂ ಮಾರಾಟವಾಗದೆ ಸಂಕಷ್ಟ ಎದುರಿಸಿದ್ದರು. ಈಗ ಮತ್ತೆ ಕರೊನಾ ಏರುಮುಖ ಕಾಣುತ್ತಿದ್ದು, ಅದೇ ಚಿಂತೆ ಆವರಿಸಿದೆ !?

ಬಸವ ಜಯಂತಿ ದಿನದಿಂದಲೇ ಮೂರ್ತಿ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಕುಂಬಾರರು. ನ್ಯಾಮತಿ ಪಟ್ಟಣ, ಕೆಂಚಿಕೊಪ್ಪ, ಹೊನ್ನಾಳಿ, ಸಾಸ್ವೇಹಳ್ಳಿ, ಹರಿಹರ, ಚನ್ನಗಿರಿ ಮತ್ತು ದಾವಣಗೆರೆ ನಗರ ಸೇರಿ ಜಿಲ್ಲೆಯ ವಿವಿಧೆಡೆ ಮೂರ್ತಿ ತಯಾರಿಕರಿಗೆ ಪುರುಸೊತ್ತೇ ಇರುವುದಿಲ್ಲ, ಅಷ್ಟರ ಮಟ್ಟಿಗೆ ವಿಗ್ರಹಕ್ಕೆ ರೂಪ ಕೊಡುವಲ್ಲಿ ತೊಡಗಿರುತ್ತಾರೆ.

ಕೋವಿಡ್ ಶುರುವಾದಾಗಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಗಣೇಶ ಮೂರ್ತಿ ತಯಾರಕರು ಈಗ ತುಸು ನಿರಾಳರಾಗಿದ್ದಾರೆ. ಆದರೆ ಮತ್ತೆ ಕರೋನಾ ಏರುಮುಖ ಕಾಣುತ್ತಿದ್ದು, ಆತಂಕದಲ್ಲೇ ವಿಘ್ನ ನಿವಾರಕನಿಗೆ ರೂಪ ಕೊಡುತ್ತಿದ್ದಾರೆ ವಿಗ್ರಹ ತಯಾರಕರು. ಒಂದು ವೇಳೆ ಸರ್ಕಾರ ನಿಯಮ ಹೇರುವಂತಿದ್ದರೆ ಮೊದಲೇ ಪ್ರಕಟಿಸಿದರೆ ಒಳಿತು ಎನ್ನುತ್ತಾರೆ ಕುಂಬಾರರು.

ಅಪ್ಪು ರೂಪಿ ಗಣಪಗೆ ಫುಲ್ ಬೇಡಿಕೆ: ಪ್ರತಿ ವರ್ಷವೂ ಒಂದೊಂದು ವಿಶೇಷ ಮೂರ್ತಿಗಳಿಗೆ ಬೇಡಿಕೆ ಇರುತ್ತದೆ. ಈ ಬಾರಿ ಕನ್ನಡದ ಪವರ್ ಸ್ಟಾರ್ ಅಪ್ಪುವಿನ ಮೂರ್ತಿಗೆ ಹೆಚ್ಚಿನ ಬೇಡಿಕೆ ಇದೆ. ಈ ವರ್ಷ ಮೂರ್ತಿ ತಯಾರಿಕೆಗೆ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಜೇಡಿ ಮಣ್ಣು, ಬಣ್ಣ ಇನ್ನಿತರ ಕಚ್ಚಾ ವಸ್ತುಗಳ ದರ ಹೆಚ್ಚಿದ್ದು, ಕರೋನಾ ಸಮಯದಲ್ಲಿ ಸಂಕಷ್ಟ ಎದುರಾಗಿದೆ ಎನ್ನುತ್ತಾರೆ ನ್ಯಾಮತಿ ಪಟ್ಟಣದ ಮೂರ್ತಿ ತಯಾರಕ ದೊಡ್ಡಮನೆ ಗಿರೀಶ್.

50ಕ್ಕೂ ಹೆಚ್ಚು ಕುಟುಂಬಗಳಿವೆ ಇಲ್ಲಿ

ನ್ಯಾಮತಿ ತಾಲೂಕಿನಾದ್ಯಂತ 50ಕ್ಕೂ ಹೆಚ್ಚು ಕುಟುಂಬಗಳು ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತಿವೆ. ನ್ಯಾಮತಿ, ಚೀಲೂರು, ಕೆಂಚಿಕೊಪ್ಪ ಸುತ್ತಮುತ್ತಲ ಗ್ರಾಮಗಳಲ್ಲಿ ವಿಗ್ರಹ ತಯಾರಿ ನಡೆದಿದೆ. ಕಳೆದ ಮೂರ‌್ನಾಲ್ಕು ತಿಂಗಳ ಮೊದಲಿಂದಲೇ ಅಣಿಯಾಗುತ್ತಿವೆ. ಇಲ್ಲಿ ಸಿದ್ಧಪಡಿಸುವ ಗಣೇಶ ಮೂರ್ತಿಗಳು ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಗದಗ, ರಾಣೆಬೆನ್ನೂರು, ಬಳ್ಳಾರಿ, ಗದಗ, ಹಲಗೇರಿ, ಹಂಸಬಾವಿ, ಶಿಕಾರಿಪುರ ಹೀಗೆ ನಾನಾ ನಗರ ಪ್ರದೇಶಗಳಲ್ಲಿ ಪ್ರತಿಷ್ಠಾನೆ ಕಾಣುತ್ತವೆ. ಪ್ರತಿ ವರ್ಷ ಚೌತಿಗೆ ಇಲ್ಲಿನ ಕುಂಬಾರರು ಸುಮಾರು 50 ರಿಂದ 70 ಲಕ್ಷ ರೂ. ವ್ಯವಹಾರ ಮಾಡುತ್ತಾರೆ ಎನ್ನುತ್ತಾರೆ ಮಲ್ಲಿಕಾರ್ಜುನಪ್ಪ ಹೊಸಮನೆ.

ಖಾದಿ ಧ್ವಜದಂತೆ, ಜೇಡಿ ಮಣ್ಣಿನ ಗಣಪನಿಗೆ ಸಿಗಲಿ ಪ್ರಥಮಾದ್ಯತೆ

ಕುಂಬಾರ ಸಮುದಾಯಕ್ಕೆ ಸದ್ಯ ಮಡಕೆ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿ ತುಸು ಕಾಸು ಕಾಣುವ ಋತು ಆಗಿದೆ. ಹೀಗಾಗಿ ಸ್ವಾತಾಂತ್ರೃ ಅಮೃತ ಮಹೋತ್ಸವದಲ್ಲಿ ಪ್ಲಾಸ್ಟಿಕ್ ಧ್ವಜ ಬ್ಯಾನ್ ಮಾಡಿ ಖಾದಿ ಧ್ವಜಕ್ಕೆ ಆದ್ಯತೆ ನೀಡಿದಂತೆ ಸರ್ಕಾರ, ಪರಿಸರ ಹಾನಿ ವಿಗ್ರಹ ಬ್ಯಾನ್ ಮಾಡಿ ಮಣ್ಣಿನ ಮೂರ್ತಿಗಳಿಗೆ ಅವಕಾಶ ಕೊಡಲಿ. ಪರಿಸರ ಕಾಳಜಿ ದೃಷ್ಟಿಯಿಂದ ಮಣ್ಣಿನ ಮೂರ್ತಿಯೇ ಶ್ರೇಷ್ಠ. ಅದರಲ್ಲೂ ಜೇಡಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಬಳಸುವಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರಿಂದ ಪರಿಸರ ಸ್ವಚ್ಛತೆ ಕಾಪಾಡುವ ಜತೆಗೆ ಕುಂಬಾರರ, ಕುಶಲಕರ್ಮಿಗಳ ಜೀವನ ಹಸನಾಗುತ್ತದೆ ಎಂಬುದು ಸಮುದಾಯದವರ ಒತ್ತಾಸೆ.