ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದು, ಹಣಕಾಸು ಸಚಿವರೂ ಆಗಿ 16ನೇ ಬಾರಿಗೆ ಬಜೆಟ್ ಮಂಡಿಸಲು ಸನ್ನದ್ಧವಾಗಿದ್ದಾರೆ. ಹೀಗಾಗಿ ಈ ಬಾರಿಯ ಆಯವ್ಯಯದಲ್ಲಿ ಜಿಲ್ಲೆಗೆ ಭರಪೂರ ಕೊಡುಗೆಗಳು ಸಿಗಬಹುದು ಎಂದು ನಿರೀಕ್ಷೆಯೂ ಹೆಚ್ಚಿದೆ.
ದಸರಾ ಪ್ರಾಧಿಕಾರ, ಇಂಡಸ್ಟ್ರಿಯಲ್ ಕಾರಿಡಾರ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಸೇರಿದಂತೆ ಹತ್ತಾರು ನಿರೀಕ್ಷೆಗಳು ಈಡೇರಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ. ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಮೂರನೇ ಬಾರಿಗೆ ಮಂಡಿಸುತ್ತಿರುವ ಬಜೆಟ್ ಇದಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚಿನ ಯೋಜನೆ ಮತ್ತು ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ಹಿಂದೆ ತಮ್ಮದೇ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಸಿದ್ದರಾಮಯ್ಯ ಘೋಷಿಸಿದ್ದರು. ಬಳಿಕ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೇಳಿಕೊಳ್ಳುವಂತ ಯೋಜನೆಗಳು ದೊರೆಯಲಿಲ್ಲ. ಸದ್ಯಕ್ಕೆ ಜಿಲ್ಲೆಯವರೇ ಮುಖ್ಯಮಂತ್ರಿ ಆಗಿರುವುದರಿಂದ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ.
ಬಜೆಟ್‌ನಲ್ಲಿ ಕೈಗಾರಿಕೆಗಳ ಬೇಡಿಕೆಗೂ ಸ್ಪಂದಿಸಬೇಕಿದೆ. ಕೈಗಾರಿಕೆಗಳ ಉತ್ತೇಜನಕ್ಕಾಗಿ ಮಲ್ಟಿ ಸ್ಟೋರ್ ಪಾರ್ಕಿಂಗ್ ಮಾಡುವುದು, ಮೈಸೂರು-ಮಂಗಳೂರು ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಮಾಡುವ ಅಗತ್ಯವಿದೆ. ಅದಕ್ಕಾಗಿ ವಿಶೇಷ ಅನುದಾನ ಅಗತ್ಯವಿದೆ.
ಮೈಸೂರಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಅಗತ್ಯವಿದೆ. ಅದಕ್ಕಾಗಿ ವರುಣ ಕ್ಷೇತ್ರದಲ್ಲಿರುವ ಸರ್ಕಾರಿ ಜಾಗದಲ್ಲಿ ಇದನ್ನು ನಿರ್ಮಿಸಿ ಬಡಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡಬೇಕು. ಜತೆಗೆ ಸರ್ಕಾರಿ ಕಾನೂನು ಕಾಲೇಜು ನಿರ್ಮಾಣ ಮಾಡಬೇಕು. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿಕೊಡುವ ಸಂಬಂಧವೂ ಬಜೆಟ್‌ನಲ್ಲಿ ಘೋಷಣೆ ಆಗಬೇಕು.
ತಲಕಾಡು ಪ್ರದೇಶವನ್ನು ಯತ್ರಾ ಸ್ಥಳವಾಗಿ ಪರಿವರ್ತಿಸುವುದು, ಚಾಮುಂಡಿ ಬೆಟ್ಟವನ್ನು ನೈಸರ್ಗಿಕವಾಗಿ ಕಾಪಾಡಿಕೊಂಡು ಪರಿಸರಸ್ನೇಹಿಯಾಗಿ ಯೋಜನೆ ರೂಪಿಸುವುದು, ವಿದ್ಯಾರಣ್ಯಪುರಂನಲ್ಲಿರುವ ಸೀವೇಜ್ ಫಾರಂನಲ್ಲಿ ಸಂಗ್ರವಾಗಿರುವ ತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ಅನುದಾನ ಮೀಸಲಿಡುವ ಸಾಧ್ಯತೆಗಳಿವೆೆ.
ದಿನದಿಂದ ದಿನಕ್ಕೆ ವಿಸ್ತಾರವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ಮುಂದಿನ 30-50 ವರ್ಷಗಳ ಸಂಚಾರ ದಟ್ಟಣೆ ಸಮಸ್ಯೆ ನೀಗಿಸಲು ಪೆರಿಫೆರಲ್ ರಿಂಗ್‌ರಸ್ತೆ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ ಅಗತ್ಯ ಭೂಮಿಯ ಸಾಧೀನಕ್ಕಾಗಿ ಅನುದಾನ ಘೋಷಣೆ ಮಾಡುವುದು ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಕೊಡುತ್ತಿರುವ 150 ಕೋಟಿ ರೂ. ಅನುದಾನದ ಬದಲಿಗೆ ಈ ಬಾರಿ 300 ಕೋಟಿ ರೂ. ಅನುದಾನ ಮೀಸಲಿಡುವ ನಿರೀಕ್ಷೆ ಹೊಂದಲಾಗಿದೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ವ್ಯವಸ್ಥಿತವಾಗಿ ಆಚರಿಸಲು ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಎರಡನೇ ಬಾರಿ ಮುಖ್ಯಮಂತ್ರಿಯಾದ ಮೊದಲ ಬಾರಿ ಮಧ್ಯಂತರ ಬಜೆಟ್ ಆಗಿದ್ದ ಕಾರಣ ಹೆಚ್ಚು ಯೋಜನೆ ಘೋಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಕಳೆದ ವರ್ಷ ಮಂಡಿಸಿದ ಬಜೆಟ್‌ನಲ್ಲೂ ಅದು ಘೋಷಣೆ ಆಗಲಿಲ್ಲ. ಇದೀಗ ಮತ್ತೆ ದಸರಾ ಪ್ರಾಧಿಕಾರದ ಕೂಗು ಜೋರಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಕೂಡ ಇತ್ತೀಚೆಗೆ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಂದು ವೇಳೆ ಪ್ರಾಧಿಕಾರ ರಚನೆಯಾದರೆ ನಾಡಹಬ್ಬ ದಸರಾವನ್ನು ವ್ಯವಸ್ಥಿತವಾಗಿ ಆಚರಿಸುವ ಜತೆಗೆ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಜತೆಗೆ ಮೈಸೂರಿನ ಪ್ರವಾಸೋದ್ಯಮಕ್ಕೂ ಬೂಸ್ಟರ್ ನೀಡಿದಂತಾಗಲಿದೆ.
ಪಾರಂಪರಿಕ ನಗರಿ ಎಂದೇ ಕರೆಯಲ್ಪಡುವ ಮೈಸೂರಿನಲ್ಲಿ ಅರಮನೆ, ಜಯಲಕ್ಷ್ಮೀ ವಿಲಾಸ ಅರಮನೆ, ದೇವರಾಜ ಮತ್ತು ಲ್ಯಾನ್ಸ್‌ಡೌನ್ ಕಟ್ಟಡ, ಹಳೆಯ ಡಿಸಿ ಕಚೇರಿ ಕಟ್ಟಡ, ದೊಡ್ಡ ಗಡಿಯಾರ, ಮಹಾರಾಣಿ ಮಹಿಳಾ ಕಾಲೇಜು, ಮಹಾರಾಜ ಕಾಲೇಜು ಕಟ್ಟಡ ಸೇರಿದಂತೆ ನೂರಾರು ಪಾರಂಪರಿಕ ಕಟ್ಟಡಗಳು ಇದ್ದು, ಸೂಕ್ತ ನಿರ್ವಹಣೆ ಮತ್ತು ಅನುದಾನದ ಕೊರತೆಯಿಂದ ಕುಸಿದು ಬೀಳುತ್ತಿವೆ. ಮೈಸೂರಿನ ಅಸ್ಮಿತೆಯಾಗಿರುವ ಈ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕಿದೆ. ಇದರಿಂದ ಮುಂದಿನ ತಲೆಮಾರಿಗೂ ಕಟ್ಟಡಗಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿದೆ.
ನಂಜನಗೂಡು ತಾಲೂಕಿನ ಇಮ್ಮಾವು ಬಳಿಯ 160 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿ(ಚಿತ್ರ ನಗರಿ)ಯನ್ನು ನಿರ್ಮಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಹಿಂದಿನ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸಲು ತೀರ್ಮಾನಿಸಿ, ಇಮ್ಮಾವು ಗ್ರಾಮದಲ್ಲಿ 110 ಎಕರೆ ವಿಸ್ತೀರ್ಣದ ಭೂಮಿಯನ್ನು ಮೀಸಲಿರಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತಣೆಗೆ 50 ಎಕರೆ ಜಮೀನನ್ನು ಗುರುತಿಸಿ ನೀಡಲು ತೀರ್ಮಾನಿಸಲಾಗಿದೆ. ಚಿತ್ರನಗರಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಕೆಲಸಕ್ಕೆ ವೇಗ ನೀಡಬೇಕಿದೆ.
ವರುಣ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಲು ಅನುದಾನ ಪ್ರಕಟಿಸುವ ನಿರೀಕ್ಷೆ ಇದೆ. ಚಿತ್ರನಗರಿ ನಿರ್ಮಾಣದಿಂದ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ. ಜತೆಗೆ ಮೈಸೂರು-ನಂಜನಗೂಡಿನ ರಿಯಲ್ ಎಸ್ಟೇಟ್ ಮತ್ತು ಹೋಟೆಲ್ ಉದ್ಯಮ ಗರಿಗೆದರಲಿದೆ.
ಈ ಸಲ ಕೈಗಾರಿಕಾ ನೀತಿ ರೂಪಿಸಲಾಗುತ್ತಿದೆ. ಅದರಲ್ಲಿ ಮೈಸೂರು ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಸೌಲಭ್ಯ ಮತ್ತು ನೆರವು ಕಲ್ಪಿಸಿಕೊಡಬೇಕು. ಸಿದ್ದರಾಮಯ್ಯ ಈ ಹಿಂದೆ ಘೋಷಣೆ ಮಾಡಿದ್ದ ರಫ್ತು ಕೇಂದ್ರ ನನೆಗುದಿಗೆ ಬಿದ್ದಿದೆ. ಅನುದಾನ ನೀಡಿ ಈ ಕೆಲಸಕ್ಕೆ ಮರು ಚಾಲನೆ ನೀಡಬೇಕು. ಸುರೇಶ್‌ಕುಮಾರ್ ಜೈನ್ ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ