ಜಿಲ್ಲೆ

ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಗೋಕುಲ ರಸ್ತೆ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಯನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸುವಂತೆ ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದ ಅವರು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ನಗರ ಭೂಸಾರಿಗೆ ನಿರ್ದೇಶನಾಲಯದ ಆರ್ಥಿಕ ಸಹಯೋಗದಲ್ಲಿ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಸ್ ನಿಲುಗಡೆ ಅಂಕಣಗಳು ಹಾಗೂ ಪ್ರಯಾಣಿಕರ ನಿರೀಕ್ಷಣಾ ಅಂಕಣಗಳ ಪುನರ್ ನಿರ್ವಣ, ಪ್ರಯಾಣಿಕರಿಗೆ ನೂತನ ಮಾದರಿಯ ಆಸನಗಳ ವ್ಯವಸ್ಥೆ, ಪುರುಷರು ಹಾಗೂ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಶೌಚಗೃಹ ನಿರ್ವಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಸ್​ಗಳ ಆಗಮನ-ನಿರ್ಗಮನಗಳ ಮಾಹಿತಿ ವ್ಯವಸ್ಥೆ ಮುಂತಾದ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡುವಂತೆ ತಿಳಿಸಿದರು.

ಬಿಸಿಲು ಹಾಗೂ ಮಳೆಯಿಂದ ರಕ್ಷಣೆಯ ಜತೆಗೆ ಸೌಂದಯೀಕರಣದೊಂದಿಗೆ ಪ್ರಯಾಣಿಕ ಸ್ನೇಹಿ ಬಸ್ ನಿಲ್ದಾಣವನ್ನಾಗಿ ರೂಪಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬಸ್ ನಿಲ್ದಾಣದಲ್ಲಿರುವ ಸಿಬ್ಬಂದಿ ವಿಶ್ರಾಂತಿ ಗೃಹ ಹಾಗೂ ಕಾಗೋ ಕೇಂದ್ರದ ಪರಿವೀಕ್ಷಣೆ ಮಾಡಿದರು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಕುಗಳ ಸಾಗಾಣಿಕೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಿದರು.

ಹಿರಿಯ ಅಧಿಕಾರಿಗಳಾದ ದಿವಾಕರ ಯರಗೊಪ್ಪ, ವಿವೇಕಾನಂದ ವಿಶ್ವಜ್ಞ, ಎಚ್. ರಾಮನಗೌಡರ, ಕೆ.ಎಲ್. ಗುಡೆಣ್ಣವರ, ಶಿವಕುಮಾರ, ರವಿ ಅಂಚಿಗಾವಿ, ಗುತ್ತಿಗೆದಾರರಾದ ಪ್ರಶಾಂತ ಶೆಟ್ಟಿ, ಮತ್ತಿತ್ತರರು ಇದ್ದರು.