ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ- ಧಾರವಾಡ ನಗರ ಸಾರಿಗೆ ವಿಭಾಗದ ವತಿಯಿಂದ ಬಸವ ಜಯಂತಿ ಉತ್ಸವ-ವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಗೋಕುಲ ರಸ್ತೆಯ ಬಿ ಆರ್ ಟಿ ಎಸ್ ಘಟಕದಿಂದ ಹುಬ್ಬಳ್ಳಿ ನಗರ ಸಾರಿಗೆ ಘಟಕದ ವರೆಗೆ ವಿಶ್ವಗುರು ಬಸವಣ್ಣನವರ ಭವ್ಯ ಪುತ್ಥಳಿ ಮೆರವಣಿಗೆ ಮಾಡಲಾಯಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಗುದ್ದಲಿ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ, ಪ್ರತಿಯೊಬ್ಬ ಮನುಷ್ಯ ನುಡಿದಂತೆ ನಡೆಯಬೇಕು. ಶರಣರ ಹಾದಿಯಲ್ಲಿ ಬದುಕಿ ಸಮಸಮಾಜದ ಕನಸನ್ನು ನನಸು ಮಾಡಬೇಕು. ಇಂದಿನ ಪಾಲಕರು ತಮ್ಮಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸಬೇಕು ಎಂದು ಹೇಳಿದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ 206ನೇ ರ್ಯಾಂಕ್ ಪಡೆದ ನಗರದ ಈಶಿಕಾ ಸಿಂಗ್ ಅವರಿಗೆ ಸನ್ಮಾನಿಸಲಾಯಿತು. ವಿಭಾಗೀಯ ನಿಯಂತ್ರಣಾಧಿಕಾರಿ ಶಿದ್ದಲಿಂಗೇಶ, ಎಂ. ಅಧ್ಯಕ್ಷತೆ ವಹಿಸಿದ್ದರು.