ಜಿಲ್ಲೆ

ಸಮಾನ ಶಿಕ್ಷಣ ವಿದ್ಯಾರ್ಥಿ ಮಿತ್ರದ ಆಶಯ; ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಸಲಹೆ ; ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ ಬಿಡುಗಡೆ

Tumakuru

ನೊಣವಿನಕೆರೆ : ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಶಿಕ್ಷಣ ದೊರೆಯಬೇಕೆಂಬ ಮಹತ್ವದ ಉದ್ದೇಶವನ್ನು ವಿಜಯವಾಣಿ ‘ವಿದ್ಯಾರ್ಥಿ, ಉದ್ಯೋಗ ಮಿತ್ರ’ ಹೊಂದಿದೆ ಎಂದು ಕಾಡಸಿದ್ದೇಶ್ವರ ಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಕಾಡಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ವಿಜಯವಾಣಿ ವಿದ್ಯಾರ್ಥಿ ಮಿತ್ರ ಹಾಗೂ ಉದ್ಯೋಗ ಮಿತ್ರ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು, ಮನೆಪಾಠಗಳಿಗೆ ಹೋಗಲು, ವಿಶೇಷ ಕಲಿಕೆಗೆ ಶಕ್ತರಲ್ಲದ ಮಕ್ಕಳಿಗೆ ವಿದ್ಯಾರ್ಥಿ ಮಿತ್ರ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಲಿದೆ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಎದುರಿಸುವ ಭಯ, ಆತಂಕವನ್ನು ವಿದ್ಯಾರ್ಥಿಗಳಲ್ಲಿ ದೂರ ಮಾಡಲು ಪ್ರತಿನಿತ್ಯ ಪತ್ರಿಕೆಯಲ್ಲಿ ಸಿದ್ಧಪಡಿಸಿದ ಪ್ರಶ್ನೋತ್ತರ ನೀಡಲಿದ್ದು ಇದರ ಅಭ್ಯಾಸದಿಂದ ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳನ್ನೂ ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ಕರೊನಾದಿಂದ ಶಿಕ್ಷಣ ರಂಗದಲ್ಲಿ ಸಾಕಷ್ಟು ಏರುಪೇರು ಉಂಟಾಗಿದ್ದು ವಿದ್ಯಾರ್ಥಿಗಳ ಕಲಿಕೆ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಕರೊನಾ ಕಾರ್ಮೋಡ ಸರಿದು ಭೌತಿಕ ತರಗತಿಗಳು ಆರಂಭವಾಗಿದ್ದು ಮಕ್ಕಳ ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿ ಮಿತ್ರವನ್ನು ಮತ್ತೆ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೂ ಸಾಕಷ್ಟು ಮಾಹಿತಿ ಸಿಗಲಿರುವ ವಿದ್ಯಾರ್ಥಿಗಳ ಪಾಲಿಗೆ ಅಕ್ಷರಶಃ ಮಿತ್ರ ಎನಿಸಿದೆ ಎಂದು ಶ್ರೀಗಳು ತಿಳಿಸಿದರು.

ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕಾಡಸಿದ್ದೇಶ್ವರ ಮಠದ ಆಡಳಿತಾಧಿಕಾರಿ ಎಲ್.ಸಿದ್ದಲಿಂಗಪ್ಪ, ಮುಖ್ಯಶಿಕ್ಷಕ ಬಿ.ಒ.ಈಶ್ವರಪ್ಪ, ಶಿಕ್ಷಕರಾದ ಬಿ.ರೇಣುಕಾಪ್ರಸಾದ್, ಜಿ.ಮಂಜುನಾಥ್, ಆರ್.ಗಂಗಾಧರಯ್ಯ, ನಕುಲಯ್ಯ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಕೈಸೇರಿದ ಮಿತ್ರ : ಹೊಸ ವರ್ಷಕ್ಕೆ ಹೊಸ ರೂಪದೊಂದಿಗೆ ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ ಸಂಚಿಕೆ ಹೊರಬಂದಿದ್ದು ಜಿಲ್ಲೆಯ ಎಲ್ಲಾ ತಾಲೂಕು ವಿದ್ಯಾರ್ಥಿಗಳ ಕೈಸೇರಿದೆ. ಕರೊನಾ ಸಂಕಷ್ಟದ ಬಳಿಕ ಆನ್‌ಲೈನ್‌ನಲ್ಲಿ ಪ್ರಕಟಗೊಳ್ಳುತ್ತಿದ್ದ ವಿದ್ಯಾರ್ಥಿ ಮಿತ್ರದ ಮುದ್ರಣ ಆವೃತ್ತಿ ಮರು ಆರಂಭಗೊಂಡಿದ್ದು ಹೊಸ ವರ್ಷದ ಮೊದಲ ದಿನವೇ ವಿದ್ಯಾರ್ಥಿ ಮಿತ್ರನನ್ನು ಶಾಲಾ-ಕಾಲೇಜುಗಳಲ್ಲಿ ಸ್ವಾಗತಿಸಲಾಯಿತು.