ಮಡಿಕೇರಿ: ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯಯುತ ಸದೃಢ ದೇಹ ಮತ್ತು ಮನಸ್ಸಿಗೆ ಪೌಷ್ಟಿಕಾಂಶಯುಕ್ತ ಆಹಾರ ಅತ್ಯಗತ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪೌಷ್ಟಿಕ ಆಹಾರದ ಬಗ್ಗೆ ಜಾಗೃತರಾಗಿ ಶಿಶು ಮತ್ತು ತಾಯಿ ಮರಣವನ್ನು ತಡೆಯುವಂತಾಗಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಸಲಹೆ ಮಾಡಿದರು.
ನಗರದ ಮಕ್ಕಳ ಹೊರ ರೋಗಿ ವಿಭಾಗ ಮುಂಭಾಗ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಮಂಗಳವಾರ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ’ರಾಷ್ಟ್ರೀಯ ಪೌಷ್ಟಿಕ ಮಾಸಾಚಾರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆಯು ವಾರಕ್ಕೆ ಅಥವಾ ತಿಂಗಳ ಆಚರಣೆಗೆ ಸೀಮಿತವಾಗಬಾರದು. ವರ್ಷವಿಡೀ ಪೌಷ್ಟಿಕ ಆಹಾರದ ಬಗ್ಗೆ ಜನರು ಜಾಗೃತರಾಗಿ ಪೌಷ್ಟಿಕ ಆಹಾರವನ್ನು ಸೇವಿಸಿ, ಆರೋಗ್ಯವಂತ ಜೀವನ ನಡೆಸುವಂತಾಗಬೇಕು. ದೇಶದಲ್ಲಿ ಶೇ.೪೨.೫ ರಷ್ಟು ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ ಶೇ.೫೦ ರಷ್ಟು ಗರ್ಭಿಣಿಯರು ರಕ್ತ ಹೀನತೆ ಹಾಗೂ ಇನ್ನಿತರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆ, ರಕ್ತಹೀನತೆ ಹಾಗೂ ನಿಗದಿತ ಸಮಯಕ್ಕಿಂತ ಮೊದಲೇ ಮಕ್ಕಳ ಜನನ ಹೀಗೆ ಹಲವಾರು ಕಾರಣಗಳಿಂದಾಗಿ ಗರ್ಭದಲ್ಲಿಯೇ ಮಗು ಮರಣ ಹೊಂದುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಹೊಟ್ಟೆ ತುಂಬಾ ಆಹಾರ ಸೇವಿಸುವುದು ಮುಖ್ಯವಲ್ಲ. ಬದಲು ನಾವು ಸೇವಿಸುವ ಆಹಾರದಲ್ಲಿ ಎಷ್ಟರಮಟ್ಟಿಗೆ ಪೌಷ್ಟಿಕಾಂಶಗಳನ್ನು ಕಾಯ್ದುಕೊಂಡಿದ್ದೇವೆ ಎಂಬುದು ಮುಖ್ಯ ಎಂದು ತಿಳಿಸಿದರು.
ಡಾ.ರಾಮಚಂದ್ರ ಕಾಮತ್ ಮಾತನಾಡಿ, ಅಪೌಷ್ಟಿಕತೆಯನ್ನು ಹೆಚ್ಚಾಗಿ ಮಕ್ಕಳಲ್ಲಿ ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆ ಆಯೋಜಿಸಲಾಗುತ್ತಿದೆ. ಪ್ರಸ್ತುತ ದಿನದಲ್ಲಿ ಮಕ್ಕಳು ಸರಿಯಾಗಿ ಆಹಾರ ಸೇವಿಸುತ್ತಿಲ್ಲ ಎಂಬುವುದು ಪ್ರತಿಯೊಬ್ಬ ಪಾಲಕರ ದೂರಾಗಿದೆ. ಸಾತ್ವಿಕ ಆಹಾರವನ್ನು ಪ್ರತಿಯೊಬ್ಬರೂ ಸೇವಿಸುವಂತಾಗಬೇಕು. ಶಿಸ್ತಿನ ಜೀವನ ನಡೆಸುವವರು ಆರೋಗ್ಯವಂತರಾಗಿರುತ್ತಾರೆ. ಆದ್ದರಿಂದ ಸೊಪ್ಪು ಮತ್ತು ತರಕಾರಿಯನ್ನು ಹೆಚ್ಚು ಸೇವಿಸುವಂತಾಗಬೇಕು ಎಂದರು.
ಸದೃಢ ಹಾಗೂ ಆರೋಗ್ಯವಂತ ಜೀವನಕ್ಕೆ ಪೌಷ್ಟಿಕ ಆಹಾರ ಸಹಕಾರಿ. ಮುಂದೊಂದು ದಿನ ಪ್ರತಿಯೊಬ್ಬರೂ ಪೌಷ್ಟಿಕ ಆಹಾರದ ಕುರಿತು ಜಾಗೃತರಾಗಿ ಪೌಷ್ಟಿಕ ಆಹಾರವನ್ನು ಹುಡುಕಿಕೊಂಡು ಹೋಗುವ ಸನ್ನಿವೇಶ ಎದುರಾಗುತ್ತದೆ. ನಾಲಿಗೆಗೆ ರುಚಿ ಕೊಡುವ ಆಹಾರ ದೇಹಕ್ಕೆ ಒಳ್ಳೆಯದಲ್ಲ. ಸಾತ್ವಿಕ ಆಹಾರಗಳು ದೇಹಕ್ಕೆ ಹಾಗೂ ಆರೋಗ್ಯವಂತ ಜೀವನಕ್ಕೆ ಒಳ್ಳೆಯದು. ಶಿಸ್ತಿನ ಜೀವನವನ್ನು ನಡೆಸುವುದರ ಜೊತೆಗೆ ವ್ಯಾಯಾಮ, ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯವಂತ ಜೀವನವನ್ನು ನಡೆಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ, ನರ್ಸಿಂಗ್ ಪ್ರಿನ್ಸಿಪಲ್ ಮಂಜುಳಾ, ನರ್ಸಿಂಗ್ ಸೂಪರ್‌ಡೆಂಟ್ ವೀಣಾ ಮಾತನಾಡಿದರು. ವೈದ್ಯರು, ಆಸ್ಪತ್ರೆ ಸಿಬ್ಬಂದಿ ವರ್ಗದವರು, ವೈದ್ಯಕೀಯ ವಿದ್ಯಾರ್ಥಿಗಳು, ಬಾಣಂತಿಯರು ಇತರರು ಇದ್ದರು.