ಜಂಬೂಸವಾರಿ ಆನೆ ಅರ್ಜುನ 
ಜಿಲ್ಲೆ

ಗಜಪಡೆಗೆ ಪೌಷ್ಟಿಕ ಆಹಾರ!

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಉತ್ಸವ ಮುಕ್ತಾಯದವರೆಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಅರಣ್ಯ ಇಲಾಖೆ ಮೆನು ಸಿದ್ಧಪಡಿಸಿದೆ. ಅರಮನೆ ಅಂಗಳದಲ್ಲಿ ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಮತ್ತು ಅವರ ಕುಟುಂಬದವರಿಗೆ ದೊರೆಯಲಿರುವ ಭರ್ಜರಿ ಆತಿಥ್ಯ ಆನೆಗಳಿಗೂ ಸಿಗಲಿದೆ.


ಈ ಬಾರಿ 14 ಆನೆಗಳನ್ನು ಕರೆತರಲಾಗುತ್ತಿದ್ದು, ಅವುಗಳಿಗೆ ಯಾವುದೇ ಕೊರತೆಯಾಗದಂತೆ ನಿತ್ಯ ಪುಷ್ಕಳ ಆಹಾರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ಹೆಚ್ಚಿನ ದೈಹಿಕ ಸಾಮರ್ಥ್ಯದ ಅವಶ್ಯಕತೆ ಇದೆ. ಹೀಗಾಗಿ, ಆನೆಗಳ ಸಾಮರ್ಥ್ಯ ವೃದ್ಧಿಗೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಪೌಷ್ಟಿಕ ಆಹಾರ ನೀಡಲು ಸಿದ್ಧತೆ ನಡೆಸಲಾಗಿದೆ.

ಹೀಗಿದೆ ಆಹಾರ ಕ್ರಮ:

ಆನೆಗಳಿಗೆ ಹೊಟ್ಟೆ ತುಂಬುವಷ್ಟು ಹುಲ್ಲು, ಸೊಪ್ಪು ನೀಡಲಾಗುವುದು. ಬೆಳಗ್ಗೆ 6.30 ಮತ್ತು ರಾತ್ರಿ 7ಕ್ಕೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ ನೀಡಲಾಗುತ್ತದೆ. ಸಂಜೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಬೆಲ್ಲ, ಭತ್ತದ ಒಣಹುಲ್ಲಿನ ಜತೆ ಹಿಂಡಿ, ಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಗುತ್ತದೆ.


ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಆಗಮಿಸಲಿವೆ. ಭೀಮ, ಮಹೇಂದ್ರ, ಅರ್ಜುನ, ಧನಂಜಯ, ಗೋಪಿ, ಪಾರ್ಥಸಾರಥಿ, ವಿಜಯಾ, ವರಲಕ್ಷ್ಮೀ ಆನೆಗಳು ಮೈಸೂರಿನ ಕಡೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ. ಎರಡನೇ ತಂಡದಲ್ಲಿ ಎರಡು ಹೊಸ ಆನೆಗಳ ಜತೆಗೆ 5 ಆನೆಗಳು ಬರುವ ಸಾಧ್ಯತೆ ಇದೆ. ಕಳೆದ ಬಾರಿಯೂ 14 ಆನೆಗಳನ್ನು ಕರೆತರಲಾಗಿತ್ತು. 2020 ಮತ್ತು 2021ನೇ ಸಾಲಿನಲ್ಲಿ ಕರೊನಾ ಕಾರಣದಿಂದ ಸರಳವಾಗಿ ದಸರಾ ಆಚರಿಸಲಾಗಿತ್ತು. ಆದ್ದರಿಂದ ಆಗ 8 ಆನೆಗಳನ್ನು ಮಾತ್ರ ಕರೆತರಲಾಗಿತ್ತು. ಸೆ.1ರಂದು ವೀರನಹೊಸಳ್ಳಿ ಗೇಟ್ ಬಳಿ ಗಜಪಯಣ ನಡೆಯಲಿದೆ. ಅಂದು ಮೈಸೂರಿಗೆ ಆಗಮಿಸುವ ಆನೆಗಳು ಅಶೋಕಪುರಂನ ಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಲಿವೆ. ಅರಣ್ಯ ಭವನದ ಆವರಣದಲ್ಲಿ ಮೂರು ದಿನ ಬೀಡು ಬಿಡಲಿರುವ ಆನೆಗಳಿಗೆ ಆ ಅವಧಿಯಲ್ಲಿ ಕಬ್ಬು, ಬೆಲ್ಲ, ಭತ್ತ, ತೆಂಗಿನಕಾಯಿ, ಭತ್ತದ ಒಣಹುಲ್ಲು ನೀಡಲಾಗುತ್ತದೆ.

ಅರಮನೆ ಪ್ರವೇಶಿಸಿದ ಬಳಿಕ ಪೌಷ್ಟಿಕ ಆಹಾರ


ಸೆ. 4ರಂದು ಬೆಳಗ್ಗೆ 6 ರಿಂದ 6.30 ರ ವೇಳೆ ಆನೆಗಳಿಗೆ ವಿಶೇಷ ಪೂಜೆ ನಡೆಯಲಿದ್ದು, ನಂತರ ಕಾಲ್ನಡಿಗೆಯಲ್ಲಿ ಅರಮನೆ ಆವರಣ ಪ್ರವೇಶಿಸಲಿವೆ. ಅಂದಿನಿಂದ ಆನೆಗಳಿಗೆ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತದೆ.


ಆನೆಗಳು ಅರಮನೆ ಪ್ರವೇಶಿಸಿದ 2-3 ದಿನಗಳ ನಂತರ ನಿತ್ಯ ತಾಲೀಮು ಆರಂಭಗೊಳ್ಳಲಿದೆ. ಸೆ.6 ಅಥವಾ 7ರಿಂದ ತಾಲೀಮು ನಡೆಯಲಿದ್ದು, ಆರಂಭದಲ್ಲಿ ತಾಲೀಮು ಅರಮನೆ ಆವರಣಕ್ಕೆ ಸೀಮಿತವಾಗಿರಲಿದೆ. ಬಳಿಕ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಆನೆಗಳು ನಿತ್ಯ ತಾಲೀಮು ನಡೆಸಲಿವೆ. ಐದು ದಿನ ಕಳೆದ ನಂತರ ಭಾರ ಹೊರುವ ತಾಲೀಮು ಪ್ರಾರಂಭವಾಗಲಿದೆ. ಈ ಅವಧಿಯಲ್ಲಿ ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ಧನಂಜಯ, ಗೋಪಿ, ಪಾರ್ಥಸಾರಥಿ ಆನೆಗಳಿಗೆ ಭಾರ ಹೊರಿಸಲಾಗುತ್ತದೆ. ಈ ಏಳು ಆನೆಗಳಿಗೆ ದೈಹಿಕ ಸಾಮರ್ಥ್ಯ ವೃದ್ಧಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ದೊರೆಯಲಿದೆ. ಪೌಷ್ಟಿಕ ಆಹಾರ ಆನೆಗಳ ತಾಲೀಮಿಗೆ ಅನುಕೂಲವಾಗಲಿದೆ. ಜತೆಗೆ, ಇತರ ಆನೆಗಳನ್ನೂ ಸಿದ್ಧಗೊಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತೂಕ ಕಡಿಮೆಯಾಗಿದ್ದರೆ ವಿಶೇಷ ಆರೈಕೆ!


ಆನೆಗಳ ಆರೋಗ್ಯದ ಬಗ್ಗೆ ವಿಶೇಷ ನಿಗಾ ಇಡುವ ಉದ್ದೇಶದಿಂದ ಅರಮನೆ ಪ್ರವೇಶಿಸಿದ ನಂತರ ಒಂದು ದಿನ ತೂಕ ಪರೀಕ್ಷಿಸಲಾಗುವುದು. ಒಂದು ವೇಳೆ ಕಳೆದ ವರ್ಷಕ್ಕಿಂತ ಸಾಕಷ್ಟು ಪ್ರಮಾಣದಲ್ಲಿ ತೂಕ ಇಳಿಕೆಯಾಗಿದ್ದಲ್ಲಿ ಅವುಗಳಿಗೆ ವಿಶೇಷ ಆರೈಕೆ ದೊರೆಯಲಿದೆ. ಆನೆಗಳು ತಾಲೀಮು ಮುಗಿಸಿ ಬಂದ ನಂತರ ಸ್ನಾನ ಮಾಡಿಸಿ ಶುಚಿಗೊಳಿಸುವ ಕಾರ್ಯ ನಿತ್ಯ ನಡೆಯುತ್ತದೆ. ಒಂದು ತಿಂಗಳ ಅವಧಿಯಲ್ಲಿ ಆನೆಗಳ ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ.

ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ಪ್ರತಿ ಬಾರಿಯಂತೆ ಈ ವರ್ಷವೂ ಬೆಳಗ್ಗೆ ಹಾಗೂ ಸಂಜೆ ವಿಶೇಷ ಆಹಾರ ನೀಡಲಾಗುವುದು. ಅದಕ್ಕಾಗಿ ಅರಣ್ಯ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಸೆ.1ರಂದು ವೀರನಹೊಸಳ್ಳಿ ಗೇಟ್ ಬಳಿ ಗಜಪಯಣ ನಡೆಯಲಿದೆ. ಅಂದು ಮೈಸೂರಿಗೆ ಆಗಮಿಸುವ ಆನೆಗಳು ಅಶೋಕಪುರಂನ ಅರಣ್ಯ ಭವನದಲ್ಲಿ ಇರಲಿವೆ. ಮೂರ‌್ನಾಲ್ಕು ದಿನಗಳ ಬಳಿಕ ಅರಮನೆ ಪ್ರವೇಶಿಸಲಿವೆ. ಅಂದಿನಿಂದ ಆನೆಗಳಿಗೆ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತದೆ.ಸೌರಭ್‌ಕುಮಾರ್ ಡಿಸಿಎಫ್