ವಿಜಯವಾಣಿ ಸುದ್ದಿಜಾಲ ಪಾತಪಾಳ್ಯ
ವಿಟಮಿನ್, ಕ್ಯಾಲ್ಸಿಯಂ ಮತ್ತು ಖನಿಜ ಸೇರಿ ಹಲವು ಪೋಷಕಾಂಶಗಳು ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಹಾಗೂ ದೈಹಿಕ ಚಟುವಟಿಕೆಗಳಿಗೆ ಅವಶ್ಯ ಎಂದು ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ವಿ.ವಿನೋದ್‌ಕುಮಾರ್ ತಿಳಿಸಿದರು.
ಬುಕ್ಕನಪಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಟಮಿನ್ ಎ ಕುರಿತಾದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನ ಅಂಗಾಂಗಗಳಲ್ಲಿ ಕಣ್ಣು ಬಲು ಸೂಕ್ಷ್ಮ ಅಂಗ. ಪ್ರತಿಯೊಬ್ಬರಿಗೂ ಕಣ್ಣಿನ ದೃಷ್ಟಿಯ ಬಗ್ಗೆ ಅರಿವಿರಬೇಕು. ಆಗ ಮಾತ್ರ ಕಣ್ಣಿನ ರಕ್ಷಣೆ ಸಾಧ್ಯ. ಕಣ್ಣಿನ ಸೋಂಕು, ವಿಟಮಿನ್ ಎ ಕೊರತೆ, ಅಪೌಷ್ಟಿಕತೆ, ಅಕ್ಷಿಪಟಲದ ಗಾಯ, ಅನುವಂಶಿಕ ನ್ಯೂನ್ಯತೆಗಳು ದುಷ್ಟಿ ದೋಷಗಳಿಗೆ ಕಾರಣವಾಗಿವೆ. ಇಂತಹ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣವೇ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಕಣ್ಣಿನ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಪಿ.ಎ.ಶಶಿಕಲಾ ಮಾತನಾಡಿ ವಿಟಮಿನ್ ಎ, ಸಿ ಮತ್ತು ಇ ಪೋಷಕಾಂಶಗಳು ಕಣ್ಣಿಗೆ ಸಂಬಂಧಿಸಿದ ಕಾಯಿಲೆ ಬಾರದಂತೆ ರಕ್ಷಿಸುತ್ತದೆ. ಸಿಟ್ರಸ್ ಜಾತಿಯ ಹಣ್ಣುಗಳು ಅಂದರೆ ನಿಂಬೆ, ಕಿತ್ತಳೆ, ಮೋಸಂಬಿ, ಕಿವಿ ಮೊದಲಾದ ಹುಳಿ ರುಚಿಯ ಹಣ್ಣುಗಳು, ಒಮೆಗಾ 3 ಕೊಬ್ಬಿನ ಆಮ್ಲಯುಕ್ತ ಮೀನು, ಹಸಿರು ತರಕಾರಿ, ಕ್ಯಾರೆಟ್, ಸಿಹಿ ಆಲೂಗಡ್ಡೆ ಕಣ್ಣಿನ ಆರೋಗ್ಯಕ್ಕೆ ಬೇಕಾದ ವಿಟಮಿನ್ ಒದಗಿಸುತ್ತದೆ ಎಂದರು.