ಜಿಲ್ಲೆ

ಕಾಡಾನೆ ದಾಳಿಗೆ ಅಡಕೆ ಮರಗಳು ನಾಶ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ತಾಲೂಕಿನ ಮುತ್ತಿನಕೊಪ್ಪ, ಕಡಹಿನಬೈಲು ಗ್ರಾಮ ಪಂಚಾಯಿತಿಗೆ ಸೇರಿದ ಮಡಬೂರು, ಸಾತ್ಕೋಳಿ, ಆರಂಬಳ್ಳಿ, ಮಾವಿನಕೆರೆ, ಸೂಸಲವಾನಿ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಕಳೆದ 4-5 ದಿನಗಳಿಂದ ಕಾಡಾನೆಗಳ ಕಾಟ ವಿಪರೀತವಾಗಿದ್ದು ನೂರಾರು ಅಡಕೆ, ಬಾಳೆ ನಾಶಪಡಿಸಿದೆ.

ಮಡಬೂರಿನ ಡಾ.ಅನಿಲ್‌ಕುಮಾರ್, ಕೇಶವಮೂರ್ತಿ, ವಿಜಯಕುಮಾರ್,ರಮಾಮಣಿ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ನೂರಾರು ಅಡಕೆ ಮರಗಳನ್ನು ಹಾಳುಮಾಡಿದೆ. ಕಡಹಿನಬೈಲು ಗ್ರಾಪಂನ ಚನ್ನಮಣೆ ಎಂಬಲ್ಲಿ ಬಾಳೆಗಿಡಗಳನ್ನು ಹಾಳು ಮಾಡಿದೆ. ಕಳೆದ ಒಂದು ವಾರದಿಂದ ಹೆಮ್ಮೂರು ಭಾಗದಲ್ಲೇ ಸುತ್ತಾಡುತ್ತಿರುವ ಕಾಡಾನೆಗಳು ಅಡಕೆ ತೋಟಗಳನ್ನು ನಾಶ ಮಾಡುತ್ತಿವೆ.

ಈ ಹಿಂದೆ ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗುತ್ತಿದ್ದ ಕಾಡಾನೆಗಳು ಬೆಳಗ್ಗೆ ಕಾಡಿನ ಪೊದೆಗಳಲ್ಲಿ ಅಡಗುತ್ತಿದ್ದವು. ಈಗ ಕಾಡಾನೆಗಳು ಹಗಲು ಹೊತ್ತಿನಲ್ಲೂ ಅಡಕೆ ತೋಟಕ್ಕೆ ನುಗ್ಗಿ ಬೆಳೆ ನಾಶಪಡಿಸುತ್ತಿದೆ. ಇದರಿಂದ ರೈತರು ಭಯಗೊಂಡಿದ್ದು, ಅಡಕೆ ಕೊನೆ ತೆಗೆಯಲು ಹೋಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಒಂದು ವಾರದಿಂದ 2 ರಿಂದ 3 ಕಾಡಾನೆಗಳು ಪ್ರತಿ ನಿತ್ಯ 10ರಿಂದ 15 ಕಿ.ಮಿ. ಸಂಚರಿಸುತ್ತಾ ಅಡಕೆ, ಬಾಳೆಯನ್ನು ನಾಶಮಾಡುತ್ತಿವೆ. ಲಕ್ಕವಳ್ಳಿಯ ವನ್ಯಜೀವಿ ಅರಣ್ಯ ಭಾಗಕ್ಕೆ ಹೊಂದಿಕೊಂಡಿರುವ ಮಡಬೂರು, ಎಕ್ಕಡಬೈಲು, ಆರಂಬಳ್ಳಿ, ಜಾವಗಲ್, ಚೆನ್ನಮಣಿ, ಜೇನುಕಟ್ಟೆಸರದ ಭಾಗದಲ್ಲಿ ರೈಲ್ವೆ ಹಳಿಗಳ ಬ್ಯಾರಿಕೇಡ್ ಹಾಕಿದರೆ ಕಾಡಾನೆಗಳು ಆ ಭಾಗದಿಂದ ಬರಲು ಸಾಧ್ಯವಾಗುವುದಿಲ್ಲ.ಇದರಿಂದ 40 ರಿಂದ 50 ಹಳ್ಳಿಗಳಿಗೆ ಕಾಡಾನೆಗಳ ಕಾಟ ತಪ್ಪುತ್ತದೆ ಎಂದು ಕಡಹಿನಬೈಲು ಗ್ರಾಪಂನ ರೈತ ನಾಗರಾಜ ಮನವಿ ಮಾಡಿದ್ದಾರೆ.