ಕಕ್ಕರಸಿ ಗ್ರಾಮದಲ್ಲಿ ಅಡಕೆ, ಬಾಳೆ ಹಾಗೂ ಪೈಪ್‌ಗಳನ್ನು ನಾಶ ಪಡಿಸಿರುವುದು.  
ಜಿಲ್ಲೆ

ಅಡಕೆ, ಬಾಳೆ ಸಸಿಗಳು ನಾಶ; ಗ್ರಾಮಸ್ಥರ ವಿರುದ್ಧ ದೂರು

ಸೊರಬ: ಅಕ್ರಮವಾಗಿ ಜಮೀನನ್ನು ಪ್ರವೇಶಿಸಿ ಅಡಕೆ, ಬಾಳೆ ಗಿಡಗಳು ಹಾಗೂ ಪೈಪ್‌ಗಳನ್ನು ನಾಶ ಪಡಿಸಿದ್ದಾರೆ ಎಂದು ತಾಲೂಕಿನ ಕಕ್ಕರಸಿ ಗ್ರಾಮಸ್ಥರ ವಿರುದ್ಧ ಗುಂಡಶೆಟ್ಟಿಕೊಪ್ಪ ಗ್ರಾಮದ ಭೋಜರಾಜ್ ಎಂಬುವರು ದೂರು ನೀಡಿದ್ದಾರೆ.

ಶುಕ್ರವಾರ ಮುಂಜಾನೆ ಏಕಾಏಕಿ ಕಕ್ಕರಸಿ ಗ್ರಾಮದ ಸತೀಶ, ಕೃಷ್ಣಪ್ಪ, ರಾಮಚಂದ್ರ, ಪರಸಪ್ಪ ಹಾಗೂ ಇತರರು ಸೇರಿ ಕಕ್ಕರಸಿ ಗ್ರಾಮದಲ್ಲಿ ನನಗೆ ಸೇರಿಸುವ ಸಾಗುವಳಿ ಜಮೀನಿನಲ್ಲಿ ಬೆಳೆಸಿದ್ದ 700 ಅಡಕೆ, 50 ಬಾಳೆಗಿಡಗಳನ್ನು ಹಾಗೂ 20 ನೀರಿನ ಪೈಪುಗಳನ್ನು ಕಡಿದು ನಾಶ ಮಾಡಿದ್ದಾರೆ. ನನ್ನ ಸಹೋದರ ನಿಂಗರಾಜ್ ಬೆಳೆಗೆ ನೀರು ಹಾಯಿಸಲು ಹೋದಾಗ ಗ್ರಾಮಸ್ಥರು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಭೋಜರಾಜ್ ದೂರು ನೀಡಿದ್ದಾರೆ.
ಸೊರಬ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಕಕ್ಕರಸಿ ಗ್ರಾಮಸ್ಥರು ಹಾಗೂ ಸಾಗುವಳಿದಾರರು ನಡುವೆ ಮೊದಲಿನಿಂದಲೂ ಭಿನ್ನಾಭಿಪ್ರಾಯಗಳಿದ್ದವು ಎನ್ನಲಾಗಿದೆ.