ಉಡುಪಿ: ಖಾಸಗಿ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸಿ ಬೇರೆಯವರಿಗೆ ಹಂಚಿರುವ ಬಗ್ಗೆ ಯಾವುದೇ ಪುರಾವೆ ಲಭಿಸಿಲ್ಲ ಎಂದು ಜಿಲ್ಲಾ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ತಿಳಿಸಿದ್ದಾರೆ.
ಮಂಗಳವಾರ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ನಡೆದಿರುವ ಘಟನೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿ ಆಂತರಿಕ ತನಿಖೆ ನಡೆಸಿ, ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದೆ. ವಿದ್ಯಾರ್ಥಿನಿಯರು ಬಳಸಿದ್ದ ಮೊಬೈಲ್ ವಶಕ್ಕೆ ಪಡೆದಿದ್ದೇವೆ. ನ್ ಮಾಡಲು ವಿಡಿಯೋವನ್ನು ಮಾಡಿದ್ದು, ನಂತರ ಡಿಲೀಟ್ ಮಾಡಿದ್ದೇವೆ ಎಂದು ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಗೆ ತಿಳಿಸಿದ್ದಾರೆ ಎಂದು ಹೇಳಿದರು.
ವಿಡಿಯೋವನ್ನು ಬಳಸಿ ಬ್ಲ್ಯಾಕ್ ಮೇಲ್ ಮಾಡುವ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡಿದೆಯೇ ಎಂಬುದನ್ನು ತಿಳಿದುಕೊಳ್ಳಲು ಗಮನ ಇಟ್ಟಿದ್ದೇವೆ. ಪ್ರಸ್ತುತ ಬೇರೆ ಪ್ರಕರಣಗಳ ವಿಡಿಯೋ ಶೇರ್ ಆಗುತ್ತಿದ್ದು, ವಾಯ್ಸ್ ಎಡಿಟ್ ಮಾಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಗಾ ಇರಿಸಲಾಗಿದೆ ಎಂದರು.
ರಶ್ಮಿ ಸಾವಂತ್ ಈ ಘಟನೆಯ ಕುರಿತು ಟ್ವೀಟ್ ಮಾಡಿದ್ದಾರೆ. ಅವರ ಅಕೌಂಟ್ ಚೆಕ್ ಮಾಡಿದ್ದೇವೆ. ಇದೇ ವಿಚಾರದಲ್ಲಿ ಮನೆಯವರ ಬಳಿ ಮಾತನಾಡಿದ್ದೇವೆ ಎಂದು ಸ್ಪಷ್ಟಿಪಡಿಸಿದ್ದಾರೆ. ಸಾಮಾಜಿಕ ಹಿತಾಸಕ್ತಿಯಿಂದ ಸುಮೋಟೋ ಪ್ರಕರಣ ದಾಖಲಿಸಲು ಯಾವುದೇ ಸಾಕ್ಷಿ ಸಿಗುತ್ತಿಲ್ಲ.
ಯುವತಿಯರ ಮೊಬೈಲ್ನಲ್ಲಿ ಯಾವುದೇ ಫೋಟೋ, ವೀಡಿಯೋ ಪತ್ತೆಯಾಗಿಲ್ಲ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ದಿನಕರ್ ಉಪಸ್ಥಿತರಿದ್ದರು.