ವಿಜಯಪುರ: ನರ್ಸ್ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿ. ನರ್ಸ್‌ಗಳು ರೋಗಿಗಳ ಪಾಲಿನ ನೈಜ ಆಪದ್ಬಾಂಧವರು. ರೋಗಿಯ ಸೇವೆ ಮಾಡುವ ನಿಟ್ಟಿನಲ್ಲಿ ನರ್ಸ್ ವೃತ್ತಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಮನಸ್ಸು ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.
ನಗರದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ದೀಪದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮತ್ತು ಆಕ್ಸ್‌ಫರ್ಡ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ರೋಗಿಗಳಲ್ಲಿ ಭಗವಂತನನ್ನು ಕಂಡು ನಿಮ್ಮ ವೃತ್ತಿಯ ಪಾವಿತ್ರೃ ಹೆಚ್ಚಿಸಿಕೊಳ್ಳಬೇಕು. ಜೀವನದಲ್ಲಿ ಪರೋಪಕಾರ ಮಾಡುವುದರಿಂದ ಸಿಗುವ ಆತ್ಮ ತೃಪ್ತಿ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ಶ್ರೇಷ್ಠ ನರ್ಸ್‌ಗಳಾಗಿ ನೀವು ಓದಿದ ಕಾಲೇಜಿನ ಕೀರ್ತಿ ಹೆಚ್ಚಿಸಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿ ವೈದ್ಯೆ ಡಾ. ಶ್ವೇತಾ ಶರಣ ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರನ್ನು ಎಷ್ಟು ಅವಲಂಭಿಸಿರುತ್ತಾರೋ, ಅದಕ್ಕಿಂತ ಹೆಚ್ಚಿಗೆ ನರ್ಸ್‌ಗಳನ್ನು ಅವಲಂಭಿಸಿರುತ್ತಾರೆ. ಹೀಗಾಗಿ ತಾಯಿಯಂತೆ ನೀವು ರೋಗಿಗಳ ಆರೈಕೆ ಮಾಡಿ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ರಾಜೀವ ಗಾಂಧಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಡಾ. ಸಂತೋಷ ಇಂಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ ಲಿಂಗದಳ್ಳಿ, ಪ್ರಾಚಾರ್ಯೆ ಶ್ವೇತಾ ಬಿರಾದಾರ, ಪ್ರಕಾಶ ಸಿದ್ದಾಪುರ, ರಾಜಕುಮಾರ ತಿಡಗುಂದಿ ಮತ್ತಿತರರಿದ್ದರು.