ಜಿಲ್ಲೆ

‘ನರ್ಸಿಂಗ್ ವಿದ್ಯಾರ್ಥಿಗಳಿಗೆ ಅರಿವು’ ಕಾರ್ಯಕ್ರಮ

ಸುನಿಲ್ ಪೊನ್ನೇಟಿ

ಮಡಿಕೇರಿ:

ಹದಿನೆಂಟು ವರ್ಷದೊಳಗಿನ ಮಕ್ಕಳಲ್ಲಿ ಬೌದ್ಧಿಕ, ಮಾನಸಿಕ, ದೈಹಿಕ ಹಾಗೂ ಭಾಷಾ ಬೆಳವಣಿಗೆಗೆ ಹೆಚ್ಚಿನ ಅವಕಾಶವಿದ್ದು, ಈ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಗಮನಹರಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸರ್ಕಾರಿ ಶುಶ್ರೂಷಕರ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಬಾಲನ್ಯಾಯ ಕಾಯ್ದೆ (ಮಕ್ಕಳ ಪೋಷಣೆ ಮತ್ತು ರಕ್ಷಣೆ), ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ದತ್ತು ಅಧಿನಿಯಮ ಕುರಿತು ‘ನರ್ಸಿಂಗ್ ವಿದ್ಯಾರ್ಥಿಗಳಿಗೆ ಅರಿವು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಯಸ್ಕ ಮಕ್ಕಳಲ್ಲಿ ಕಲಿಕೆಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಜತೆಗೆ ಒಳ್ಳೆಯ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಯಲು ಅವಕಾಶಗಳಿದ್ದು, ಆ ನಿಟ್ಟಿನಲ್ಲಿ ಮನೆಯಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ, ಗ್ರಾಮೀಣ ಶಿಕ್ಷಣ ಪಡೆ, ಗ್ರಂಥಾಲಯ, ಅಂಗನವಾಡಿಯಲ್ಲಿ ಬಾಲ ವಿಕಾಸ, ಹೀಗೆ ಹಲವು ಸಮಿತಿಗಳಿದ್ದು, ಮೂರು ತಿಂಗಳಿಗೊಮ್ಮೆಯಾದರೂ ಸಭೆ ನಡೆಸಿ ಮಕ್ಕಳ ಶಿಕ್ಷಣ, ಆರೋಗ್ಯ ಕಡೆ ಗಮನಹರಿಸಿ ವಿಶೇಷ ಆದ್ಯತೆ ನೀಡಬೇಕು. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಸೇರಿದಂತೆ ವಿವಿಧ ಸಮಿತಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಸರ್ಕಾರಿ ಶಾಲೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಲು ಉತ್ತೇಜಿಸಬೇಕು. ಆಯಾಯ ಕುಟುಂಬದಲ್ಲಿ ತೊಂದರೆಗೆ ಸಿಲುಕಿದಾಗ ಮಾತ್ರ ಮಕ್ಕಳು ಮತ್ತು ಮಹಿಳೆಯರ ಬಗ್ಗೆ ಕಾಳಜಿ ವಹಿಸುತ್ತೇವೆ. ಆದರೆ ಹತ್ತಿರದ ಯಾರಾದರೂ ಸಹ ದೌರ್ಜನ್ಯ, ಶೋಷಣೆ, ನಿಂಧನೆ, ಚಿತ್ರಹಿಂಸೆಗೆ ಒಳಗಾದರೆ ನಮಗೇಕೆ ಎಂದು ಮೂಗು ಮುರಿಯುತ್ತೇವೆ. ಇದು ಸಮಾಜಕ್ಕೆ ಕಂಟಕ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿ ಸಮಾಜದಲ್ಲಿ ಬಾಲ್ಯ ವಿವಾಹಕ್ಕೆ ಜವಾಬ್ದಾರಿ ಕಳೆದುಕೊಳ್ಳುವುದು, ಮೂಢÀನಂಬಿಕೆ, ಅಜ್ಞಾನ ಮತ್ತಿತರ ವಿಷಯಗಳು ಕಾರಣವಾಗಿದೆ. ಆದ್ದರಿಂದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಬಾಲ್ಯ ವಿವಾಹ ಮಾಡಿದ್ದಲ್ಲಿ ಹೆಣ್ಣು ಮಕ್ಕಳು ಬಾಲ್ಯವನ್ನು ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಮುಂದಾಗಬಾರದು.

ಮಹಿಳೆಯರು ಆರೋಗ್ಯಕ್ಕೆ ಸಂಬAಧಿಸಿದAತೆ ಕುಟುಂಬದಲ್ಲಿ ಮುಕ್ತವಾಗಿ ಚರ್ಚಿಸುವಂತಾಗಬೇಕು. ಆಟವಾಡುವ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡಬಾರದು. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಯಾವುದೇ ಆಸೆ, ಆಕಾಂಕ್ಷೆಗಳಿಗೆ ಸಿಲುಕಬಾರದು ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ. ಈರಸ್ವಾಮಿ ಮಾತನಾಡಿ ಮಕ್ಕಳ ರಕ್ಷಣಾ ಘಟಕ ವತಿಯಿಂದ ಪ್ರಮುಖವಾಗಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಪುನರ್‌ವಸತಿ ಕಲ್ಪಿಸುವುದು, ಆರೋಗ್ಯ ಶಿಕ್ಷಣ ನೀಡುವುದು ಮತ್ತಿತರ ಕಾರ್ಯಕ್ರಮಗಳಾಗಿದೆ. ಅನಾದಿ ಕಾಲದಿಂದಲೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇ ಬಂದಿದೆ. ಮಹಿಳೆಯರು ಮತ್ತು ಮಕ್ಕಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಮಹಿಳೆಯರು ಕುಟುಂಬದ ಸುಖ, ದುಃಖ, ಸಂತಸದಲ್ಲಿ ಪಾಲ್ಗೊಂಡರೂ ಸಹ ಶೋಷಣೆ ತಪ್ಪುವುದಿಲ್ಲ, ಹಲವು ಸಂಪ್ರದಾಯ ಆಚರಣೆಗೆ ಒಳಗಾಗಿ ಪದೇ ಪದೇ ನಿಂದನೆಗೆ ಒಳಗಾಗುವುದು ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ಹಾಡಿಗಳು ಮತ್ತು ಲೈನ್‌ಮನೆಗಳಲ್ಲಿ ಕಂಡುಬರುತ್ತಿವೆ. ಹಾಗೆಯೇ ಜಿಲ್ಲೆಯಲ್ಲಿ ಪ್ರತಿ ತಿಂಗಳು 50 ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಕೆಟ್ಟ ಪದ್ಧತಿಯನ್ನು ತೊಡೆದುಹಾಕಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಎಂ.ಸೂರಜ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಎಂ.ಬಿ. ಸುಮತಿ ಮಾತನಾಡಿದರು. ಪೊಲೀಸ್ ಉಪಾಧೀಕ್ಷಕರಾದ ರವಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸರ್ಕಾರಿ ಶುಶ್ರೂಷಕ ಕಾಲೇಜಿನ ಪ್ರಾಂಶುಪಾಲರಾದ ಎ.ಕೆ. ಮಂಜುಳ, ಸಹ ಪ್ರಾಧ್ಯಾಪಕ ಕೆ.ಪಿ. ಗುರುಪಾದ, ಎಸ್.ಎನ್. ರಂಜಿನಿ ಮತ್ತಿತರರು ಇದ್ದರು.