ಜಿಲ್ಲೆ

ದಾದಿಯರ ನಿಸ್ವಾರ್ಥ ಸೇವೆ ಅನನ್ಯ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರ ನಿಸ್ವಾರ್ಥ ಸೇವೆ ಅನನ್ಯ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಬಣ್ಣಿಸಿದರು.

ತಾಲೂಕಿನ ಹಳೇಬೂದನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಮತ್ತು ಸಕ್ಕರೆ ನಾಡು ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಾದಿಯರು ರೋಗಿಗಳ ಯೋಗಕ್ಷೇಮ, ಸುರಕ್ಷತೆ ಹಾಗೂ ಚೇತರಿಕೆ ವಿಚಾರದಲ್ಲಿ ಜವಾಬ್ದಾರಿ ಮೆರೆಯುತ್ತಾರೆ ಎಂದರು.

ಇಂದು ವಿಶ್ವದಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗಲ್ ಅವರ ಜನ್ಮದಿನದ ಗೌರವಾರ್ಥವಾಗಿ ಪ್ರತಿವರ್ಷ ಮೇ.12 ಅನ್ನು ದಾದಿಯರ ಕೊಡುಗೆಯನ್ನು ವಿವರಿಸುವ ಜಾಗತಿಕ ಅಭಿಯಾನ ದಿನವನ್ನು ಆಚರಿಸಲಾಗುತ್ತಿದೆ. 2023ನೇ ವರ್ಷದ ಥೀಮ್ ನಮ್ಮ ದಾದಿಯರು. ನಮ್ಮ ಭವಿಷ್ಯ ಎಂಬುದಾಗಿದೆ. ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಮತ್ತು ವಿಶ್ವಾದ್ಯಂತ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸಲು ಭವಿಷ್ಯದಲ್ಲಿ ಶುಶ್ರೂಷೆಗಾಗಿ ದಾದಿಯರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ ಎಂದು ನುಡಿದರು.

ನರ್ಸ್‌ಗಳು ಎದುರಿಸುವ ಅನೇಕ ಸವಾಲುಗಳ ಹೊರತಾಗಿಯೂ ಹೊಸ ಜೀವನವು ಜಗತ್ತನ್ನು ಪ್ರವೇಶಿಸಲು ಮತ್ತು ಅನಾರೋಗ್ಯ ಹಾಗೂ ಗಾಯಗೊಂಡವರನ್ನು ನೋಡಿಕೊಳ್ಳಲು ಅವರು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ. ಚಿಕಿತ್ಸೆಗಳನ್ನು ನಿರ್ವಹಿಸುವುದು, ರೋಗಿಗಳನ್ನು ಮೇಲ್ವಿಚಾರಣೆ ಮಾಡುವ ಸೇವೆಗೆ ಬೆಲೆಕಟ್ಟಲಾಗದು. ಆದ್ದರಿಂದ ಅವರನ್ನು ಗೌರವಿಸಿ ನಮಿಸಬಹುದು. ಅದರಲ್ಲಿಯೂ ಕೋವಿಡ್-19ರ ದಿನಗಳಲ್ಲಿ ದಾದಿರ ಸೇವೆ, ಆಶಾ, ಆರೋಗ್ಯ, ಅಂಗವಾಡಿ ಕಾರ್ಯಕರ್ತೆಯರ ಪಾತ್ರ ಪ್ರಪಂಚಕ್ಕೆ ತಿಳಿಯಿತು. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಜನರ ಆರೋಗ್ಯ ರಕ್ಷಣೆ ಜೀವ ಉಳಿಸುವಲ್ಲಿ ಪಟ್ಟ ಶ್ರಮವನ್ನು ಜಗತ್ತು ಎಂದಿಗೂ ಮರೆಯದು. ದೇವರ ಪ್ರತಿರೂಪವಾಗಿ ವೈದ್ಯರು ಮತ್ತು ದಾದಿಯರ ಸೇವೆ ಎಲ್ಲರ ಕಣ್ಣು ತೆರೆಸಿತು ಎಂದು ಶ್ಲಾಘಿಸಿದರು.

ಹಳೇ ಬೂದನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶರತ್‌ಚಂದ್ರ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರು ಬೆನ್ನೆಲುಬಾಗಿ ಸೇವೆ ಸಲ್ಲಿಸುತ್ತಾರೆ. ರೋಗಿಗಳ ಶುಶ್ರೂಷೆ ಮತ್ತು ಆರೋಗ್ಯ ಚೇತರಿಕೆಗೆ ನೀಡು ಶ್ರಮ ದೊಡ್ಡದು. ವೈದ್ಯರಾದ ನಾವು ಔಷಧಗಳನ್ನು ಚೀಟಿಗೆ ಬರೆದು ಕೊಡುತ್ತೇವೆ. ಆದರೆ ಔಷಧಗಳನ್ನು ಸರಿಯಾದ ಸಮಯಕ್ಕೆ ಕೊಡುವುದರ ಜತೆಗೆ ಗುಣಮುಖರಾಗಲು ಸಲ್ಲಿಸುವ ಸೇವೆಯನ್ನು ಸ್ಮರಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಮೋಹನ್‌ಕುಮಾರ್, ಸಕ್ಕರೆ ನಾಡು ಲಯನ್ಸ್ ಸಂಸ್ಥೆ ಅಧ್ಯಕ್ಷ ಶಶಿಧರ ಈಚಗೆರೆ, ನಗರಸಭೆ ಸದಸ್ಯ ಕುಮಾರ್, ಗ್ರಾಪಂ ಮಾಜಿ ಸದಸ್ಯ ಸತೀಶ್, ಸಮಾಜ ಸೇವಕ ಶಿವಕುಮಾರ್, ಚಂದ್ರಶೇಖರ್, ಚೇತನ್‌ಕುಮಾರ್ ಇತರರಿದ್ದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರಾದ ಪಿ.ಶಿವಮ್ಮ, ಪವಿತ್ರಾ, ಮಧು ಮಾಲತಿ, ರೂಪಾ, ನಂದಿನಿ, ನಿತ್ಯಶ್ರೀ, ಸುಚಿತ್ರಾ, ಎಸ್.ಆಶಾ, ಶಿವು ಹುಲ್ಲಹಳ್ಳಿ, ಭರತ್ ಅವರನ್ನು ಅಭಿನಂದಿಸಲಾಯಿತು.