ಜಿಲ್ಲೆ

ಸಹಬಾಳ್ವೆ ಸಂವಿಧಾನದ ಮೂಲ ತತ್ವ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಂವಿಧಾನ ಪ್ರಕಾರ ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಅನುಸರಿಸುವ ಹಕ್ಕು ಇದೆ. ಛತ್ತೀಸ್​ಘಡದಲ್ಲಿ ಕೆಸ್ತ ಭಗಿನಿಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸ ನಡೆದಿದ್ದು, ಪ್ರತಿಯೊಬ್ಬರು ಖಂಡಿಸಲೇಬೇಕಾಗಿದೆ. ಸಹೋದರತೆ ಮತ್ತು ಸಹಬಾಳ್ವೆ ಸಂವಿಧಾನದ ಮೂಲ ತತ್ವ. ಇದಕ್ಕೆ ಧಕ್ಕೆ ಬಂದಾಗ ದೇಶ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ್​ ಎಕ್ಕಾರ್​ ಹೇಳಿದರು.

ಛತ್ತೀಸ್​ ಗಢದಲ್ಲಿ ಕೆಸ್ತ ಧರ್ಮ ಭಗಿನಿಯರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಕಥೊಲಿಕ್​ ಸಭಾ ಉಡುಪಿ ಪ್ರದೇಶದ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇಶದಾದ್ಯಂತ 30000ಕ್ಕೂ ಅಧಿಕ ಕೆಸ್ತ ಶಿಕ್ಷಣ ಸಂಸ್ಥೆಗಳಿದ್ದು, 50 ಲಕ್ಷ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಅದರಲ್ಲಿ 48 ಲಕ್ಷ ಮಂದಿ ಇತರ ಧರ್ಮದವರಾಗಿದ್ದಾರೆ. ಕೆಸ್ತರು ದೇಶದ ಅಭಿವೃದ್ಧಿಗೆ ಸ್ವಾತಂತ್ರ್ಯ ಪೂರ್ವದಿಂದಲೇ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಕೆಸ್ತ ಮಿಷನರಿಗಳು ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ ಎಂದರು.

ಕಥೊಲಿಕ್​ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ರೊನಾಲ್ಡ್​ ಆಲ್ಮೇಡಾ ಪ್ರಾಸ್ತಾವಿಕವಾಗಿ ಮಾತನಾಡಿ, ಷರತ್ತುಗಳ ಮೇಲೆ ಬಂಧಿತ ಧರ್ಮಭಗಿನಿಯರಿಗೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಆದರೆ ಅಲ್ಲಿನ ಸರ್ಕಾರ ಮೊಕದ್ದಮೆಗಳನ್ನು ಹಿಂಪಡೆದಿಲ್ಲ. ಅಲ್ಲದೆ ಧರ್ಮಭಗಿನಿಯರನ್ನು ಛತ್ತೀಸ್​ ಘಡದ ದುರ್ಗ ರೈಲು ನಿಲ್ದಾಣದಲ್ಲಿ ಬಲಪಂಥೀಯ ಸಂಘಟನೆಗಳು ಅಮಾನವೀಯವಾಗಿ ನಡೆಸಿಕೊಂಡಿವೆ. ಆ ಸಂಘಟನೆಗಳ ವಿರುದ್ದ ಕೂಡ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಇದೊಂದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಕೆಸ್ತ ಸಮುದಾಯದ ಬೇಡಿಕೆಗಳಿಗೆ ಛತ್ತೀಸ್​ಘಡ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಪತ್ರಕರ್ತೆ, ಯುವ ಕಾಂಗ್ರೆಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರಯ್ಯ ಅಂಜುಮ್​ ಮಾತನಾಡಿದರು.

ಉಡುಪಿ ಧರ್ಮಪ್ರಾಂತ್ಯದ ಶ್ರೇಫ್ಠಿಗುರು ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​ ಕುಲಪತಿ ಸ್ಟೀಫನ್​ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್​ ಡೆಸಾ, ಧಾರ್ಮಿಕ ಗುರುಗಳ ಎಪಿಸ್ಕೋಪಲ್​ ವಿಕಾರ್​ ಜ್ಯೋ ತಾವ್ರೊ, ಸಹಬಾಳ್ವೆಯ ಪ್ರೊ. ಫಣಿರಾಜ್​, ಭಾರತೀಯ ಕಥೊಲಿಕ್​ ಯುವ ಸಂಚಾಲನ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ನಿತಿನ್​ ಬಾರೆಟ್ಟೊ, ಕಥೊಲಿಕ್​ ಸಭಾ ಕಾರ್ಯದರ್ಶಿ ಜೊಯೆಲ್​, ಬ್ರಹ್ಮಾವರ ಸಿರಿಯನ್​ ಒರ್ಥೊಡಕ್ಸ್​ ಸಭೆಯ ವಿಕಾರ್​ ಜನರಲ್​ ಎಂ.ಸಿ ಮಥಾಯಿ, ಕರ್ನಾಟಕ ಸದರ್ನ್​ ಡಯಾಸಿಸ್​ ಉಡುಪಿ ಏರಿಯಾ ಚೇರಮೆನ್​ ಪಾಸ್ಟರ್​ ಕಿಶೋರ್​ ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಿಂದ ಸಂಗ್ರಹಿಸಿದ ಸಹಿಗಳ ಮೂಲಕ ದೇಶದ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ಛತ್ತೀಸ್​ ಘಡದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ನಿಯೋಜಿತ ಅಧ್ಯಕ್ಷ ಲೂಯಿಸ್​ ಡಿಸೋಜಾ ಮನವಿಯನ್ನು ವಾಚಿಸಿದರು. ಸುಗಮ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್​ ವಂದಿಸಿದರು. ಸಾಮಾಜಿಕ ಕಾರ್ಯಕರ್ತೆ ವೆರೋನಿಕಾ ಕರ್ನೆಲಿಯೋ ಕಾರ್ಯಕ್ರಮ ನಿರೂಪಿಸಿದರು.