ನಾಪೋಕ್ಲು: ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಆಟೋಗಳಿಗೆ ನೂತನ ನಂಬರ್ (ಎನ್‌ಪಿಕೆ) ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ಇಲ್ಲಿನ ಪೊಲೀಸ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಆಟೋಗಳಿಗೆ ನಂಬರ್ ವಿತರಣಾ ಕಾರ್ಯಕ್ರಮದಲ್ಲಿ ಆಟೋಗಳಿಗೆ ಸ್ಟಿಕ್ಕರ್‌ಗಳನ್ನು ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು.
ಆಟೋಗಳಿಗೆ ಈ ಹಿಂದೆ ಕೇವಲ ನಂಬರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಅದು ದುರುಪಯೋಗ ಆಗುತ್ತಿರುವುದನ್ನು ಮನಗಂಡು ನೂತನವಾಗಿ ಎನ್‌ಪಿಕೆ ನಂಬರ್ ಅಳವಡಿಸಲಾಗುತ್ತಿದೆ. ಇದರಲ್ಲಿ ಕೊಡಗು ಜಿಲ್ಲಾ ಪೊಲೀಸ್ ಎಂದು ನಮೂದಿಸಲಾಗಿದ್ದು ಸಮಸ್ಯೆಗಳಾದಲ್ಲಿ ಪತ್ತೆಗೆ ನೆರವಾಗಲಿದೆ ಎಂದರು.
ನಾಪೋಕ್ಲು ಪಟ್ಟಣದಲ್ಲಿ ರಸ್ತೆ ಕಿರಿದಾಗಿದ್ದು ಆಟೋ ನಿಲ್ದಾಣಕ್ಕೆ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಶೀಘ್ರದಲ್ಲಿ ಸ್ಥಳಾವಕಾಶ ಕಲ್ಪಿಸಲಾಗುವುದು. ಪ್ರತಿದಿನ ಆಗುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಎದುರು ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.
ಮದ್ಯಪಾನ ಮಾಡಿ ಆಟೋ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕುಡಿದು ಹಣ ಪೋಲು ಮಾಡಬೇಡಿ ಎಂದು ಸಲಹೆ ನೀಡಿದರು.
ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸುಕುಮಾರ್, ಕಾರ್ಯದರ್ಶಿ ಸತೀಶ್, ಗೌರವ ಅಧ್ಯಕ್ಷ ಎಂ.ಇ.ರಜಾಕ್, ಸಂಘದ ಸದಸ್ಯರು, ಪೊಲೀಸ್ ಸಿಬ್ಬಂದಿ ಇದ್ದರು.