ಮಡಿಕೇರಿ: ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಅನುಸರಿಸಿ ಮುನ್ನುಗ್ಗುತ್ತಿರುವ ರೋಟರಿ ಇದೇ ಕಾರಣದಿಂದಾಗಿಯೇ ವಿಶ್ವದ ಪ್ರಮುಖ ಸೇವಾ ಸಂಸ್ಥೆಯಾಗಿ ೧೧೯ ವರ್ಷಗಳಿಂದಲೂ ಮುನ್ನಡೆದಿದೆ ಎಂದು ಮುಂಬೈನ ರೋಟರಿ ಪ್ರಮುಖ, ಡಾ.ದೀಪಕ್ ಪುರೋಹಿತ್ ಹೇಳಿದರು.
೭ನೇ ಹೊಸಕೋಟೆಯ ಸಂತ ಸಬಾಸ್ಟಿನ್ ಚರ್ಚ್ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯಿಂದ ಆಯೋಜಿತ ರೋಟರಿ ಸದಸ್ಯತ್ವ ಮತ್ತು ಪಬ್ಲಿಕ್ ಇಮೇಜ್ ಸಮಾವೇಶವಾದ ವಿಸ್ತಾರ ಉದ್ಘಾಟಿಸಿ ಮಾತನಾಡಿದರು.
ರೋಟರಿಯಲ್ಲಿ ಪ್ರಸ್ತುತ ೧,೧೩೪ ಲಕ್ಷ ಸದಸ್ಯರು ವಿಶ್ವವ್ಯಾಪಿ ಇದ್ದಾರೆ. ಕಳೆದ ವರ್ಷದ ಜುಲೈನಿಂದ ಈವರೆಗೂ ೧೯,೪೦೦ ಹೊಸ ಸದಸ್ಯರನ್ನು ರೋಟರಿ ಹೊಂದಿದೆ. ೩೬,೮೬೦ ರೋಟರಿ ಕ್ಲಬ್‌ಗಳು ಜಗತ್ತಿನಲ್ಲಿವೆ. ರೋಟರಿ ಸದಸ್ಯರ ಪೈಕಿ ಶೇ, ೨೬ ರಷ್ಟು ಮಹಿಳಾ ಸದಸ್ಯರಿರುವುದು ಹೆಗ್ಗಳಿಕೆಯಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಹೊಸಬ್ಬರು ರೋಟರಿ ಸದಸ್ಯರಾಗಿ ಸೇರ್ಪಡೆಯಾಗುತ್ತಿರುವುದು ಸೇವಾ ಕಾರ್ಯಗಳಿಗೆ ಭಾರತೀಯರು ನೀಡಿದ ಮನ್ನಣೆಗೆ ಸಾಕ್ಷಿಯಾಗಿದೆ ಎಂದರು.
ಕೊಡಗನ್ನೊಳಗೊಂಡ ನಾಲ್ಕು ಕಂದಾಯ ಜಿಲ್ಲೆಗಳಿರುವ ರೋಟರಿ ಜಿಲ್ಲೆ ೩೧೮೧ನಲ್ಲಿ ಈ ವರ್ಷ ೩೫೫೦ ಸದಸ್ಯರಿದ್ದು ಕಳೆದ ೧ ವರ್ಷದಲ್ಲಿ ೧೦೦ ಹೊಸ ಸದಸ್ಯರ ಸೇರ್ಪಡೆಯಾಗಿದೆ. ನೂತನವಾಗಿ ರೋಟರಿ ಸಂಸ್ಥೆಗಳಿಗೆ ಸೇರುವ ಸದಸ್ಯರಿಗೆ ಮತ್ತಷ್ಟು ಮಾಹಿತಿಯ ಅಗತ್ಯವಿದ್ದು, ಹೀಗಾದಾಗ ಶಾಶ್ವತವಾಗಿ ಅಂಥವರು ಸದಸ್ಯರಾಗಿ ಮುಂದುವರೆಯರು ಸಾಧ್ಯ ಎಂದರು.
ರೋಟರಿ ಮಾಜಿ ಗವರ್ನರ್ ಹೊಸಪೇಟೆಯ ಗೋಪಿನಾಥ್ ಮಾತನಾಡಿ, ರೋಟರಿಯಲ್ಲಿ ಜನಸೇವೆಗಾಗಿನ ಅತ್ಯುತ್ತಮ ಯೋಜನೆಗಳಿಗೆ ಎಂದಿಗೂ ಅನುದಾನದ ಕೊರತೆ ಭಾದಿಸದು. ಜಗತ್ತಿನ ಎಲ್ಲಿಂದಲೇ ಆದರೂ ಯೋಜನೆಗಳಿಗೆ ಹಣದ ನೆರವು ದೊರಕುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ರೋಟರಿ ಮಾಜಿ ಗವರ್ನರ್ ಚೆನ್ನೈನ ಮುನಿ ಗಿರೀಶ್ ಮತನಾಡಿ, ಪಬ್ಲಿಕ್ ಇಮೇಜ್ ರೋಟರಿಗೆ ಅತ್ಯಂತ ಅಗತ್ಯವಾಗಿದೆ. ಸಾಮಾಜಿಕ ಸೇವಾ ವಲಯದಲ್ಲಿ ರೋಟರಿ ಯೋಜನೆಗಳನ್ನು ಕೇಂದ್ರೀಕರಿಸಿ ವಿನೂತನ ಕಾರ್ಯಯೋಜನೆ ಜಾರಿಗೊಳಿಸಿದರೆ ಸಾರ್ವಜನಿಕರ ಪ್ರಶಂಸೆ ಖಂಡಿತಾ ಎಂದು ಕಿವಿಮಾತು ಹೇಳಿದರು.
ರೋಟರಿ ಜಿಲ್ಲೆ ೩೧೮೧ನ ಗವರ್ನರ್ ವಿಕ್ರಂದತ್ತ ಮಾತನಾಡಿ, ರೋಟರಿಯಂಥ ಸೇವಾ ಸಂಸ್ಥೆಗೆ ಸೇರಲು ಸಮಯ ಇಲ್ಲ ಎಂಬುದು ಸರಿಯಾದ ವಾದ ಅಲ್ಲ. ಸಮಾಜಸೇವೆ ಮಾಡಲು ಪ್ರತೀಯೋರ್ವರೂ ಸಮಯ ಮಾಡಿಕೊಂಡಲ್ಲಿ ಖಂಡಿತಾ ಅಂಥವರಿಗೆ ರೋಟರಿ ಸೂಕ್ತ ಅವಕಾಶ ನೀಡುತ್ತದೆ ಎಂದರು.
ಇದೇ ಸಂದರ್ಭ ರೋಟರಿ ಸದಸ್ಯತ್ವ ಕುರಿತ ಸಂವಾದದಲ್ಲಿ ರೋಟರಿ ಪ್ರಮುಖರಾದ ಎಚ್.ಟಿ.ಅನಿಲ್, ಬಿ.ಜಿ.ಅನಂತಶಯನ, ಡಾ.ಸಿ.ಆರ್.ಪ್ರಶಾಂತ್, ರಾಘವೇಂದ್ರ, ಜಗದೀಶ್, ರಚನಾ ನಾಗೇಶ್, ಪಿ.ಆರ್.ಭಟ್ ಪಾಲ್ಗೊಂಡಿದ್ದರು. ರೋಟರಿ ಜಿಲ್ಲೆ ೩೧೮೧ನ ಮಾಜಿ ಗವರ್ನರ್‌ಗಳಾದ ಸುರೇಶ್ ಚಂಗಪ್ಪ, ಡಾ.ರವಿ ಅಪ್ಪಾಜಿ, ರವೀಂದ್ರ ಭಟ್, ಡಾ.ನಾಗಾರ್ಜುನ, ದೇವದಾಸ್ ರೈ ವೇದಿಕೆಯಲ್ಲಿದ್ದರು. ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಸೇರಿದ ರೋಟರಿ ಸಂಸ್ಥೆಗಳ ೪೫೦ ಕ್ಕೂ ಅಧಿಕ ಸದಸ್ಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.