ಮಂಡ್ಯ: ಹನ್ನೆರಡನೇ ಶತಮಾನದ ಭವ್ಯತೆಯ ಭಾಗವಾಗಿ ಭವಿಷ್ಯದ ಭಾರತಕ್ಕೆ ತಮ್ಮದೇ ಆದ ದೈವಿಕ ಸಂದೇಶಗಳನ್ನು ನೀಡಿ ಕನ್ನಡ ನಾಡಿನಲ್ಲಿ ಶ್ರೇಷ್ಟತೆಯ ಚೈತನ್ಯವನ್ನು ತಂದು ಕೊಟ್ಟು ಕಾಯಕಕ್ಕೆ ಹೆಚ್ಚು ಒತ್ತು ನೀಡಿದ ಮಹನೀಯರಲ್ಲಿ ನುಲಿಯ ಚಂದಯ್ಯ ಒಬ್ಬರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರ ಸಂಗಡಿಗರಾಗಿ ಅವರು ಮಾಡಿದ ಕ್ರಾಂತಿಗಳಿಗೆ ಬಹುದೊಡ್ಡ ಭಗವಾಗಿ, ಶೋಷಿತರ ಸಮುದಾಯವನ್ನು ಸಾಂಸ್ಕೃತಿಕ ದಿಕ್ಕಿಗೆ ಕರೆದುಕೊಂಡು ಹೋಗಲು ಕಾರಣಕರ್ತರಾದವರು ನುಲಿಯ ಚಂದಯ್ಯ ಎಂದರು.
ರಾಜ್ಯ ಸರ್ಕಾರದ ಆದೇಶದಂತೆ ಚಂದಯ್ಯ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಬಸವಣ್ಣ ಅವರ ಜತೆ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಕೃತಿ, ವಚನ, ತತ್ವಗಳಿಗೆ ದೊಡ್ಡ ವಚನಕಾರರು ಗೌರವ ಸಲ್ಲಿಸಿದ್ದಾರೆ. ಚಂದಯ್ಯ ಅವರ ಬಗ್ಗೆ ಓದಿಕೊಂಡಾಗ ಅವರ ಕೊಡುಗೆ ಅರ್ಥವಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್, ಉಪ ತಹಸೀಲ್ದಾರ್ ವಸಂತಕುಮಾರ್, ಜಿಲ್ಲಾ ಕುಳುವ ಸಮಾಜದ ಸಂಸ್ಥಾಪಕ ಅಧ್ಯಕ್ಷ ತಿರುಮಲಾಪುರ ಕೆ.ಗೋಪಾಲ್, ಮುಖಂಡರಾದ ವೆಂಕಟೇಶ್, ಗುರಪ್ಪ, ಕೃಷ್ಣ ಕುಮಾರ್, ಕರಿಯಪ್ಪ, ಸೋಮಶೇಖರ್, ಪುಟ್ಟರಾಜು ಇತರರಿದ್ದರು.