ಮಂಡ್ಯ: ನುಲಿಯ ಚಂದಯ್ಯ ಅವರು 12ನೇ ಶತಮಾನದ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಕಷ್ಟು ಶ್ರಮಿಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನುಲಿಯ ಚಂದಯ್ಯ ಅವರು ಅನುಭವ ಮಂಟಪದಲ್ಲಿ 48 ವಚನಗಳನ್ನು ರಚಿಸುವುದರ ಮೂಲಕ ಸಮಾಜದ ಅಸಮಾನತೆಯನ್ನು ತಿದ್ದಿದ್ದಾರೆ ಎಂದರು.
ಕುಳವ ಸಮುದಾಯಕ್ಕೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ಥಾನಮಾನ ಸಿಗಬೇಕಿದೆ. ನುಲಿಯ ಚಂದಯ್ಯ ಅವರ ಹೆಸರೇ ಕುಳುವ ಸಮುದಾಯಕ್ಕೆ ಪ್ರೇರಣೆ. ನಿಮ್ಮ ಸಮಾಜದವರ ಕೂಗು ಗಟ್ಟಿಯಾಗಬೇಕು. ನಿಮ್ಮ ಜತೆ ಸರ್ಕಾರ ಇದೆ. ಸಂವಿಧಾನದಡಿಯಲ್ಲಿ ಸಮಾಜದ ಎಲ್ಲ ವರ್ಗದವರಿಗೂ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ನಿಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ನುಲಿಯ ಚಂದಯ್ಯ ಅವರು ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವಾತಂತ್ರ್ಯ, ಸಮಾನತೆ ಸಿಗಬೇಕೆಂದು ದುಡಿದವರು. ಸಮಾಜವನ್ನು ಹಗ್ಗದಂತೆ ನುಲಿದು ಸಮಾಜದ ಏಕತೆಗಾಗಿ ಶ್ರಮಿಸಿದರವರು. ಹಾಗಾಗಿ ಅವರು ನಮಗೆಲ್ಲ ಪ್ರೇರಣೆ ಎಂದು ಹೇಳಿದರು.
ಅಖಿಲ ಕರ್ನಾಟಕ ಕುಳುವ ಮಹಾಸಭಾದ ಗೌರವಾಧ್ಯಕ್ಷ ಜಿ.ಚಂದ್ರಣ್ಣ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಕುಳುವ ಮಹಾಸಭಾದ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್, ನಾರಾಯಣ ತಿರುಮಲಾಪುರ, ನಾಗಮ್ಮ, ವೆಂಕಟೇಶ್, ಸಿದ್ದಾರ್ಥ, ಶಿವಕುಮಾರ್ ಇತರರಿದ್ದರು.