ಬೆಂಗಳೂರು: ವಚನಗಳು ಬದುಕಿನ ಎಲ್ಲ ಆಯಾಮಗಳನ್ನು ಒಳಗೊಂಡಿದ್ದು, ವೈಜ್ಞಾನಿಕ ತಳಹದಿಯಲ್ಲಿ ವಚನ ಧರ್ಮ ರೂಪುಗೊಂಡಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪೊ.ಎಚ್.ಎಂ. ಸೋಮಶೇಖರಪ್ಪ ತಿಳಿಸಿದ್ದಾರೆ.
ಕಲ್ಯಾಣ ಪಟ್ಟಣದ ಬಸವ ಬೆಳಕುವಿನಲ್ಲಿ ವಚನಜ್ಯೋತಿ ಬಳಗ ಆಯೋಜಿಸಿದ್ದ ನುಲಿಯ ಚೆಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತರಿಕೇರೆ ತಾಲೂಕಿನ ನಂದಿ ಗ್ರಾಮದಲ್ಲಿ ನುಲಿಯ ಚೆಂದಯ್ಯನವರ ಜಾತ್ರೆಯನ್ನು ಎಲ್ಲ ವರ್ಗಗಳ ಜನರು ಒಂದಾಗಿ ಆಚರಿಸುತ್ತಾರೆ. ಆ ಭಾಗದಲ್ಲಿ ಚೆಂದಯ್ಯನವರು ದೇವರಾಗಿ ಎಲ್ಲರ ಮನದಲ್ಲಿರುವುದು ಅವರ ವ್ಯಕ್ತಿತ್ವಕ್ಕೆ ನಿದರ್ಶನ ಎಂದು ಬಣ್ಣಿಸಿದರು.
ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ವಚನಗಳು ಶ್ರಮ ಸಂಸತಿಯ ಪ್ರತಿಫಲ. ನುಲಿಯ ಚೆಂದಯ್ಯನವರು ಕಾರ್ಯಶೀಲತೆಯ ಶಿಖರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನುಲಿಯ ಚೆಂದಯ್ಯನವರ ವಚನಗಳನ್ನು ಹಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 'ತತ್ವಪದಗಳ ಸಾಮಾಜಿಕ ಆಯಾಮಗಳು' ಕುರಿತು ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದ ಡಾ.ಎಸ್.ಸಿ. ಗಂಗರೇವಯ್ಯ ಅವರನ್ನು ಅಭಿನಂದಿಸಲಾಯಿತು.
ವಚನಜ್ಯೋತಿ ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ರಾಜಾ ಗುರುಪ್ರಸಾದ್, ಪ್ರಸನ್ನ, ಮಧು ಜಾಗತಿಕ ಲಿಂಗಾಯತದ ರಾಯಚೂರು ಜಿಲ್ಲಾಧ್ಯಕ್ಷ ಜಯಬಸವ ಇತರರಿದ್ದರು.