ಜಿಲ್ಲೆ

ಸುಸ್ಥಿರ ಅಭಿವೃದ್ಧಿಯೇ ಸಮಗ್ರ ಪ್ರಗತಿಯ ಮಾರ್ಗ,  ಕಲಬುರಗಿ ಕೇಂದ್ರಿಯ ವಿವಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಅಭಿಮತ

Dharwada - Basavaraj Idli

ಹುಬ್ಬಳ್ಳಿ: ಇಂದಿನ ಜನಾಂಗದ ಅಗತ್ಯತೆಗಳ ಅನುಭೋಗವು ಭವಿಷ್ಯದ ಜನರ ಸಂತೋಷದ ಖಚಿರ್ನಲ್ಲಿ ಆಗಬಾರದು. ಈಗಿನ ನೈಸರ್ಗಿಕ, ಆರ್ಥಿಕ, ಸಾಮಾಜಿಕ ಸಂಪನ್ಮೂಲಗಳು ಭವಿಷ್ಯದ ಜನಾಂಗಕ್ಕೂ ಇರಬೇಕು. ಇನ್ನೊಬ್ಬರ ದುಃಖದಲ್ಲಿ ನಾವು ಸಂತೋಷ ಪಡಬಾರದು ಎಂದು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಹೇಳಿದರು.

ಇಲ್ಲಿನ ಶರಣ ನೂಲಿಯ ಚಂದಯ್ಯ ಡಾ. ಬಿ.ಆರ್. ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಿಎಂಡಿಆರ್ ಸಹಯೋಗದಲ್ಲಿ ಆಯೋಜಿಸಿದ್ದ ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 134ನೇ ಸ್ಥಾನ ಪಡೆದಿದೆ. ರಾಷ್ಟ್ರೀಯ ಆದಾಯ ವೃದ್ಧಿಗೆ ಬಡತನ, ನಿರುದ್ಯೋಗ, ಅಪೌಷ್ಟಿಕತೆ ಪ್ರಮಾಣ, ಅಸಮಾನತೆಗಳ ನಿವಾರಣೆಗೆ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ ಎಂದರು.

ಸಾಂಸ್ಥಿಕ ಕೌಶಲಗಳ ಕೊರತೆ ನೀಗಿಸುವುದು, ಮಹಿಳಾ, ಶಿಶು ಮರಣ ದರ ಮತ್ತು ತಾಯಿ ಮರಣ ಪ್ರಮಾಣ ತಗ್ಗಿಸುವುದರಲ್ಲಿ ಹೆಚ್ಚಿನ ಕ್ರಾಂತಿ ಅಗತ್ಯವಿದೆ. ಜತೆಗೆ ಮಹಿಳೆಯರಿಗೆ ಉದ್ಯೋಗವಕಾಶಗಳು ಹೆಚ್ಚಬೇಕಿದೆ ಎಂದರು.

ಆಡಳಿತ ಮಂಡಳಿ ಅಧ್ಯಕ್ಷೆ ರೇಣುಕಾ ಕೆ. ಗೋಕಾಕ, ಕಾರ್ಯದರ್ಶಿ ಗಂಗಾಧರ ಗೋಕಾಕ, ಮಾರುತೆಪ್ಪ ಬೆಕ್ಕಿನಕನ್ನವರ, ಹನುಮಂತಪ್ಪ ಬೆಕ್ಕಿನಕನ್ನವರ, ಪ್ರಾಧ್ಯಾಪಕ ಡಾ. ರುದ್ರ ನಾರಾಯಣ ಮಿಶ್ರ, ಡಾ. ಸುರೇಶ ನ್ಯಾಮತಿ, ಡಾ. ಶೌಕತಅಲಿ ಮೇಗಲಮನಿ, ಪ್ರೊ. ಪ್ರಸನ್ನ ಪಂಡರಿ, ಡಾ. ಎನ್.ಎಸ್. ಕುಸುಗಲ್, ಡಾ. ಪ್ರಶಾಂತ ಕೊಪ್ಪದ, ಡಾ. ನಬೀಬ ಮುಲ್ಲಾ , ಡಾ. ಸುರೇಶ ಕೋಟಗಿ, ಪ್ರೊ. ಎಂ.ಬಿ. ಜಕಾತಿ, ಪ್ರೊ. ಶೇಕ್ ಮಹಮ್ಮದ ಮೆಹಬೂಬ್, ಪ್ರೊ. ಕೆ. ಕೊಟ್ರೇಶ, ಪ್ರೊ. ಲೋಕೇಶ ರಾಠೋಡ, ಪ್ರೊ. ಹೊಸಳ್ಳಿ ಅರುಣಕುಮಾರ, ಡಾ. ಶೀಲಾ ಭಾಸ್ಕರ, ಡಾ. ಪಿ.ಪಿ. ಕಾಮಣ್ಣನವರ ಮುಂತಾದವರು ಪಾಲ್ಗೊಂಡಿದ್ದರು.

ಪ್ರಾಂಶುಪಾಲ ಪ್ರೊ. ಪ್ರವಿಣ ಚಪ್ಪರಮನಿ ಅಧ್ಯಕ್ಷತೆ ವಹಿಸಿದ್ದರು.

ಡಾ. ಸಿದ್ದಲಿಂಗಸ್ವಾಮಿ ಹನಗೋಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಮಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಡಾ. ಬಿ.ಬಿ. ವೀರಗೊಂಡ ಸ್ವಾಗತಿಸಿದರು, ಡಾ. ಎಂ.ಡಿ. ಮಟ್ಟಿಮನಿ ಪರಿಚಯಿಸಿದರು, ಡಾ. ಸಪ್ನಾ ಜಾಧವ, ಡಾ. ಸವಿತಾ ಕೋಟಭಾಗಿ ನಿರೂಪಿಸಿದರು.