ಹನೂರು: 12ನೇ ಶತಮಾನದಲ್ಲೇ ಕಾಯಕದ ಮಹತ್ವವನ್ನು ಸಾರಿದ ಶಿವಶರಣ ನುಲಿಯ ಚಂದಯ್ಯ ಅವರ ತತ್ವಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕತೆ ಎನಿಸುತ್ತದೆ ಎಂದು ಶಿರಸ್ತೇದಾರ್ ನಾಗೇಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಅವರ 917ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಸವಣ್ಣನವರ ಸಮಕಾಲೀನ ನುಲಿಯ ಚಂದಯ್ಯ ಅವರು ಕಾಯಕದ ಮೂಲಕವೇ ಉನ್ನತಿ ಕಂಡವರು. ಹಗ್ಗ ನೇಯುವ ಕಾಯಕದಿಂದ ಬಂದ ಹಣದಿಂದ ದಾಸೋಹ ನಡೆಸಿದ ಶಿವಶರಣ. ಬಸವ ಕಲ್ಯಾಣಕ್ಕೆ ಆಗಮಿಸಿದ ಇವರು ಕಾಯಕ ತತ್ವವನ್ನು ಜನಮಾನಸದಲ್ಲಿ ಬಿತ್ತುವುದರ ಮೂಲಕ ದುಡಿಯುವ ವರ್ಗಕ್ಕೆ ಅನುವು ಮಾಡಿಕೊಟ್ಟವರು. ಇವರ ಕಾಯಕ ನಿಷ್ಠೆ ಹಾಗೂ ಪ್ರಾಮಾಣಿಕತೆ ಬಸವಣ್ಣನವರಿಗೆ ಪ್ರಿಯರಾಗಿದ್ದು, ಇವರು ರಚಿಸಿರುವ ಸುಮಾರು 48 ವಚನಗಳು ಕಾಯಕದ ಶ್ರೇಷ್ಠತೆಯನ್ನು ಸಾರುತ್ತದೆ. ಆದ್ದರಿಂದ ಇವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಪ್ರಗತಿ ಹೊಂದಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ತುಳುವ ಸಮಾಜದ ಜಿಲ್ಲಾಧ್ಯಕ್ಷ ಮಾದೇಶ್ ಮಾತನಾಡಿ, ಲಿಂಗಪೂಜೆಗಿಂತ ಕಾಯಕದ ಪೂಜೆಗೆ ಮಹತ್ವ ನೀಡಿದ ನುಲಿಯ ಚಂದಯ್ಯ ಅವರು ವಚನಗಳನ್ನು ರಚಿಸುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆ ಇವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಮೆಚ್ಚುಗೆಯ ಸಂಗತಿ. ಹಾಗೆಯೇ ಮುಂದಿನ ವರ್ಷದಿಂದ ಇವರ ಜಯಂತಿಯನ್ನು ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಆಚರಿಸುವಂತಾಗಬೇಕು. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕು ಎಂದರು.
ಪ್ರಭಾರ ಆರ್.ಐ. ಶೇಷಣ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ಕಾವ್ಯಾ, ತುಳುವ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀನಿವಾಸ ಮೂರ್ತಿ, ಪ್ರಧಾನ ಕಾರ್ಯದರ್ಶಿ ಮುನಿಯಪ್ಪ, ಸಹ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ರಾಜೇಂದ್ರ, ಮುಖಂಡರಾದ ವಿಜಯಕುಮಾರ್, ನಾಗಸುಂದರ್, ವೆಂಕಟರಾಜು, ನಟರಾಜು, ಬಸವರಾಜು, ಚೆನ್ನಯ್ಯ ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.