- ನುಗ್ಗೇಹಳ್ಳಿ : ಧರ್ಮ ಕಾರ್ಯಗಳಿಂದ ಮಾತ್ರ ಶಾಂತಿ, ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಕತ್ತರಿ ಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಹೇಳಿದರು.
- ಹೋಬಳಿಯ ದೇವಲಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾತೆಯರಿಗೆ ಶುಕ್ರವಾರ ಬಾಗಿನ ಅರ್ಪಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
- ಲಕ್ಕಮ್ಮದೇವಿಯ ಅನುಗ್ರಹದಿಂದ ಆದಷ್ಟು ಬೇಗ ಮಳೆ ಸುರಿಯುವಂತಾಗಲಿ. ರೈತರನ್ನು ಕಾಪಾಡಲಿ. ನಾಡಿಗೆ ಶಾಂತಿ, ನೆಮ್ಮದಿ ದೊರೆಯಲಿ. ದೇಶ ಸಮೃದ್ಧಿಯಾಗಲಿ ಎಂದು ವಿಶೇಷ ಪೂಜೆ, ಹೋಮ ಮಾಡಲಾಗಿದೆ. ದೇವಿ ಕೃಪೆಯೇ ಎಲ್ಲರನ್ನೂ ರಕ್ಷಿಸಬೇಕಿದೆ ಎಂದರು.
- ಮಿತಿ ಮೀರಿದ ಮಾಲಿನ್ಯ:
- ಕೆರೆ, ಕಟ್ಟೆ- ಬಾವಿಗಳನ್ನು ಮುಚ್ಚಿ ಅರಣ್ಯ ನಾಶ ಮಾಡಲಾಗಿದೆ. ಮಿತಿ ಮೀರಿದ ಪರಿಸರ ಮಾಲಿನ್ಯ ಮಾಡಿದ ಕಾರಣ ಇಂದು ಬರಗಾಲ ಎದುರಿಸುವಂತಾಗಿದೆ. ಸಕಾಲದಲ್ಲಿ ಮಳೆ ಬೀಳುತ್ತಿಲ್ಲ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
- ಮಾನವನ ಅವಶ್ಯಕತೆಗಳನ್ನು ಈಡೇರಿಸಲು ಹಳ್ಳ, ಕೊಳ್ಳ, ರಸ್ತೆ ಬದಿ ಗುಂಡು ತೋಪುಗಳನ್ನು ಮಾಡಬೇಕು. ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ ಆಗಬೇಕು. ಹಾಗಿದ್ದರೆ ಮಾತ್ರ ಮಾನವ ಸಂಕುಲ, ಪ್ರಾಣಿ ಪಕ್ಷಿಗಳ ಸಂತತಿ ಉಳಿಸಲು ಸಾಧ್ಯವಿದೆ ಎಂದು ಚಂದ್ರಶೇಖರ ಗುರೂಜಿ ಸಲಹೆ ನೀಡಿದರು.