ಹುಣಸೂರು: ನಾ.ಡಿಸೋಜ ತಮ್ಮ ಬದುಕಿನುದ್ದಕ್ಕೂ ಮಕ್ಕಳ ಸಾಹಿತ್ಯವನ್ನು ಅನುಭವಿಸಿ, ಆನಂದಿಸಿ, ಆರಾಧಿಸಿದ ಹಿರಿಯ ಸಾಹಿತಿಗಳಾಗಿದ್ದರು ಎಂದು ಮಕ್ಕಳ ಸಾಹಿತಿ ಡಾ.ಮಾದುಪ್ರಸಾದ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾ.ಡಿಸೋಜ ಗೌರವಾರ್ಥ ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡದ ಮಕ್ಕಳ ಸಾಹಿತ್ಯವು ಆಧುನಿಕತೆಯ ಭರಾಟೆಯಲ್ಲಿ ಗಂಭೀರವಾದ ಚಿಂತಕರಿಂದ ದೂರ ಉಳಿದಿತ್ತು. ಪ್ರತಿಭಾವಂತ ಲೇಖಕರು ಮಕ್ಕಳ ಸಾಹಿತ್ಯದ ಕೃಷಿಯನ್ನೇ ಕಡೆಗಣಿಸಿದ್ದರು. ಅಂತಹ ಸಂದರ್ಭದಲ್ಲಿ ಮಕ್ಕಳ ನೀಳ್ಗತೆಗಳನ್ನು, ದೀರ್ಘ ಕತೆಗಳನ್ನು ನೀಡುವ ಮೂಲಕ ಮಕ್ಕಳ ಸಾಹಿತ್ಯದ ವಲಯವನ್ನು ಬೆಳಗಿದ ಕೀರ್ತಿ ನಾ.ಡಿಸೋಜ ಅವರಿಗೆ ಸಲ್ಲಬೇಕು. ಉತ್ತರ ಕನ್ನಡ ಸೀಮೆಯ ಮಲೆನಾಡು, ಅದರ ಕೌತುಕಗಳನ್ನು ಮಕ್ಕಳ ಬೆರಗುಕಣ್ಣಿಂದ ಮೂಡುವಂತೆ ಮಾಡಿದ ಅಚ್ಚರಿಯ ಸಾಹಿತ್ಯ ನಾ.ಡಿಸೋಜ ಅವರದ್ದು. ಮಲೆನಾಡು ಪ್ರಗತಿಯ ಹೆಸರಲ್ಲಿ ಕಳೆದುಕೊಂಡ ಅಸ್ತಿತ್ವದ ಅಳಲನ್ನು ಅವರು ಮಕ್ಕಳ ಸಾಹಿತ್ಯದಲ್ಲಿ ದಟ್ಟ ವಾಸ್ತವದ ರೂಪದಲ್ಲಿ ಚಿತ್ರಿಸಿದ್ದಾರೆ ಎಂದು ಸ್ಮರಿಸಿದರು.
ಜೋಗಕ್ಕೆ ಬೆಳಕು ಬಂದ ಸಂಭ್ರಮವನ್ನೂ ಶರಾವತಿಯ ಹಿನ್ನೀರಿನಲ್ಲಿ ಮುಳುಗಡೆಯಾದವರ ನೋವನ್ನು ಮಿಳಿತಗೊಳಿಸಿ ದ್ವೀಪ ಕಾದಂಬರಿ ಬರೆದರು. ಮಕ್ಕಳ ಸಾಹಿತ್ಯದ ಕೃಷಿಗಷ್ಟೇ ನಾಡಿ ಸೀಮಿತವಲ್ಲ. ಸೂಕ್ಷ್ಮ ಸಂವೇದನೆಯ ಬರಹವೂ ನನ್ನಿಂದ ಮೂಡ ಬಲ್ಲದು ಎಂದು ತೋರಿಸಿದರು. ಅವರ ದ್ವೀಪ ಕಾದಂಬರಿ ಸಿನಿಮಾ ಆಗಿ ರಾಷ್ಟ್ರ ಮಟ್ಟದ ಗಮನ ಸೆಳೆಯಿತು. ಮಕ್ಕಳ ಸಾಹಿತ್ಯದ ಮೂಲಕವು ಕೀರ್ತಿ ಶಿಖರ ಏರಬಹುದು ಎಂಬುದನ್ನು ಅವರು ನಡೆದ ಹಾದಿಯಿಂದ ತಿಳಿಯಬಹುದಾಗಿದೆ. ಮಡಿಕೇರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದಾಗಲೂ ಮಕ್ಕಳ ಸಾಹಿತ್ಯದ ಅಸ್ಮಿತೆಯ ಬಗ್ಗೆ ದನಿ ಎತ್ತಿದವರು ಡಿಸೋಜ. ತಮ್ಮ ಬದುಕನ್ನು ಮುಗ್ಧಲೋಕದ ಸಾಹಿತ್ಯದ ಸೇವೆಗಾಗಿಯೇ ಮುಡಿಪಾಗಿಟ್ಟರು ಎಂದು ಬಣ್ಣಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ್ ಮಾತನಾಡಿ, ಡಿಸೋಜ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದರು. ಸಾಹಿತಿ ಜೆ.ಮಹದೇವ್ ಮಾತನಾಡಿದರು. ತಾಲೂಕು ಕಸಾಪ ಗೌರವ ಕಾರ್ದರ್ಶಿ ಟಿ.ಲೋಕೇಶ್, ಉಪಾಧ್ಯಕ್ಷ ಸಿ.ಎಸ್.ಮಹೇಶ್, ಖಜಾಂಚಿ ಕೆ.ನಂಜುಂಡಸ್ವಾಮಿ, ಪದಾಧಿಕಾರಿಗಳಾದ ಕೆ.ಕುಮಾರ್.ಎಸ್.ಗಂಗಾಧರ್, ಎ.ಎನ್.ತ್ರೀನೇಶ್, ಕೆ.ಎಸ್.ಕಲ್ಪನಾ, ಭಾಗ್ಯಾ, ವಾಸುಕಿ, ರುದ್ರಪ್ಪ, ಕುಮಾರಸ್ವಾಮಿ ಇತರರು ಹಾಜರಿದ್ದರು.