ಪುತ್ತೂರು: ಸಮಾಜಿಕ ಹಾಗೂ ಸಹಕಾರಿ ಕ್ಷೇತ್ರದ ಮೂಲಕ ಸಾಕಷ್ಟು ಸೇವೆಯನ್ನು ಸಲ್ಲಿಸಿದ ಶಶಿಕಲಾ ಎಸ್. ಶೆಟ್ಟಿ ಮನಸ್ಸಿನಲ್ಲಿ ಯಾವುದನ್ನೂ ಇಟ್ಟುಕೊಳ್ಳದೆ ನೇರವಾಗಿ ಹೇಳುವ ದಿಟ್ಟ ಮಹಿಳೆಯಾಗಿದ್ದರು. ಸಮಾಜದಲ್ಲಿ ಮುಂಚೂಣಿಗೆ ಬರಬೇಕೆಂಬ ಹಂಬಲವನ್ನು ಇಟ್ಟುಕೊಂಡ ಅವರು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಸಹಕಾರಿ ಕ್ಷೇತ್ರಕ್ಕೆ ೨೮ ವರ್ಷ ನಿರ್ದೇಶಕಿಯಾಗಿ, ೧೦ ವರ್ಷ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರು ಮಾಡಿದ ಕೆಲಸಗಳ ಮೂಲಕ ಸಮಾಜದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ ಎಂದು ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ರಾಜೀವಿ ಆರ್. ರೈ ಹೇಳಿದರು.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಬೆಳ್ಳಾರೆ ದರ್ಖಾಸ್ತು ಪಾಡೇಲುಗುತ್ತು ಸಂಜೀವ ಶೆಟ್ಟಿ ಅವರ ಪತ್ನಿ ಮುಪ್ಪುಂಜಗುತ್ತು ಶಶಿಕಲಾ ಎಸ್. ಶೆಟ್ಟಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನುಡಿನಮನ ಸಲ್ಲಿಸಿದ ಪ್ರಗತಿಪರ ಕೃಷಿಕ ಪ್ರದೀಪ್ ಕುಮಾರ್ ರೈ ಮಾತನಾಡಿ, ಜೀವನ ದೇವರು ನೀಡಿದ ವ್ಯವಸ್ಥೆಯಾಗಿದ್ದು, ಹೂವಿನ ದಳದಂತೆ ಮೃದುವಾದ ಬದುಕು ನಡೆಸಬೇಕು. ಕಷ್ಟದ ಸಮಯದಲ್ಲೂ ಶಕ್ತಿಯಾಗಿ ನಿಂತು ಸುಖ ಜೀವನ ಮಾಡಲು ದಾರಿ ಕಂಡುಕೊಂಡವರು ಶಶಿಕಲಾ ಎಸ್. ಶೆಟ್ಟಿ. ಕೃಷಿಯ ಜತೆಗೆ ದಿನಸಿ ಅಂಗಡಿ, ಹೋಟೆಲ್ ನಡೆಸಿಕೊಂಡು ಬದುಕು ಕಟ್ಟುವ ಕೆಲಸ ಮಾಡಿದರು. ಸಮಾಜದ ವ್ಯವಸ್ಥೆಯ ಜತೆಗೆ ಹೋಗಲು ಬೇಕಾದ ಲೋಕಜ್ಞಾನವನ್ನು ಪಡೆದುಕೊಂಡು ಸಾಮಾಜಿಕ-ಸಹಕಾರಿ ಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು.
ಮಾಸ್ ಅಧ್ಯಕ್ಷ ಸೀತಾರಾಮ ರೈ ಸವಣೂರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಬಿ. ಜಯರಾಮ ರೈ, ಸಂಜಯ ಪ್ರಭು, ಅರಣ್ಯಾಽಕಾರಿ ಪ್ರವೀಣ್ ಶೆಟ್ಟಿ ಸುಳ್ಯ, ನಿವೃತ್ತ ಪ್ರಾಂಶುಪಾಲ ಬಾಲಚಂದ್ರ ಗೌಡ, ಪುತ್ರ ದಿನೇಶ್ ಶೆಟ್ಟಿ, ಪುತ್ರಿಯರಾದ ದೀಪಿಕಾ ಶೆಟ್ಟಿ, ದಿವ್ಯ ಶೆಟ್ಟಿ, ಸುಬ್ರಹ್ಮಣ್ಯ ರೈ, ಚಂದ್ರಶೇಖರ ನಂಜೆ, ರಮ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.