ಜಿಲ್ಲೆ

12,800 ಕೋಟಿ ಮೌಲ್ಯದ ಪರಮಾಣು ವಿದ್ಯುತ್ ಯೋಜನೆ; ಎಂ.ಇ.ಐ.ಎಲ್ ನಿಂದ ಎನ್‌ಪಿಸಿಐಎಲ್​ಗೆ ಖರೀದಿ ಆದೇಶ

ಬೆಂಗಳೂರು: ದೇಶದ ವಿದ್ಯುತ್ ಉತ್ಪಾದನಾ ಕ್ಷೇತ್ರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ತಲಾ 700 ಮೆಘಾ ವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆಯ ಕೈಗಾ ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ನಿಂದ ದೇಶದ ಪ್ರಮುಖ ಮೂಲ ಸೌಕರ್ಯ ಸಂಸ್ಥೆ ಎಂಇಐಎಲ್ ಗೆ 12,800 ಕೋಟಿ ಮೊತ್ತದ ಇಪಿಸಿ ಒಪ್ಪಂದದ ಖರೀದಿ ಆದೇಶವನ್ನು ಹಸ್ತಾಂತರಿಸಿದೆ.

ಎಂ.ಇ.ಐ.ಎಲ್ನ ಈವರೆಗಿನ ಅತಿದೊಡ್ಡ ಆದೇಶವಾಗಿದ್ದು, ಭಾರತದ ಇಂಧನ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವ ಕ್ಷೇತ್ರವಾದ ಪರಮಾಣು ಇಂಧನ ವಲಯಕ್ಕೆ ಪ್ರಮುಖ ಹೆಜ್ಜೆಯಾಗಿದೆ.

ಈ ಆದೇಶವನ್ನು ಎನ್‌ಪಿಸಿಐಎಲ್ ಮುಂಬೈ ಪ್ರಧಾನ ಕಚೇರಿಯಲ್ಲಿ ಎಂ.ಇ.ಐ.ಎಲ್ನ ನಿರ್ದೇಶಕ ಸಿ.ಎಚ್.ಪಿ. ಸುಬ್ಬಯ್ಯ ಮತ್ತು ಅವರ ತಂಡಕ್ಕೆ ಔಪಚಾರಿಕವಾಗಿ ಹಸ್ತಾಂತರಿಸಲಾಯಿತು. ಇದು ಕೇವಲ ವೃತ್ತಿಪರ ಸಾಧನೆಯಲ್ಲ, ಹೆಮ್ಮೆ, ಮನ್ನಣೆ ಮತ್ತು ಆಳವಾದ ಜವಾಬ್ದಾರಿಯಿಂದ ತುಂಬಿದ ಕ್ಷಣವಾಗಿತ್ತು ಎಂದು ಸಂಸ್ಥೆಯು ಬಣ್ಣಿಸಿದೆ.

ಮೊದಲ ಬಾರಿಗೆ ಎನ್‌ಪಿಸಿಐಎಲ್ ಈ ಯೋಜನೆಯನ್ನು ನೀಡಲು ಗುಣಮಟ್ಟದ ಜತೆ ವೆಚ್ಚ ಆಧಾರಿತ ಆಯ್ಕೆ ವಿಧಾನವನ್ನು ಬಳಸಿದೆ. ಬಿಎಚ್‌ಇಎಲ್ ಮತ್ತು ಎಲ್ ಆ್ಯಂಡ್ ಟಿ ಯಂತಹ ಉದ್ಯಮ ದೈತ್ಯರೊಂದಿಗೆ ಸ್ಪರ್ಧೆ ನಡುವೆ ಎಂಇಐಎಲ್ ಅನ್ನು ಅದರ ಬಲವಾದ ತಾಂತ್ರಿಕ ವಿಧಾನ ಮತ್ತು ಸ್ಪರ್ಧಾತ್ಮಕ ಬೆಲೆ ನಿಗದಿಗಾಗಿ ಆಯ್ಕೆ ಮಾಡಲಾಗಿದೆ.

ಎಂಇಐಎಲ್ ಭಾರತದ ಪ್ರಮುಖ ಮೂಲಸೌಕರ್ಯ ಕಂಪನಿಗಳಲ್ಲಿ ಒಂದಾಗಿದೆ, ವಿದ್ಯುತ್, ನೀರು, ಹೈಡ್ರೋಕಾರ್ಬನ್‌ಗಳು, ನೀರಾವರಿ, ತೈಲ ಮತ್ತು ರಿಗ್‌ಗಳು, ರಕ್ಷಣೆ, ಸಾರಿಗೆ, ಸಂಕುಚಿತ ಅನಿಲ ವಿತರಣೆ, ವಿದ್ಯುತ್ ಸರಬರಾಜು ಮತ್ತು ಈಗ ಪರಮಾಣು ಶಕ್ತಿ ಸೇರಿದಂತೆ ಮೂಲ ಸೌಕರ್ಯ ಕ್ಷೇತ್ರದಲ್ಲಿ ತನ್ನ ಇರುವಿಕೆಯನ್ನು ಸಾಬೀತುಪಡಿಸಿದೆ.