ಜಿಲ್ಲೆ

ಜಿಲ್ಲೆಯಲ್ಲಿ 15 ಅಪಾಯಕಾರಿ ಕಾರ್ಖಾನೆಗಳು

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ 15 ಅಪಾಯಕಾರಿ ಕಾರ್ಖಾನೆಗಳು ಅಸ್ತಿತ್ವದಲ್ಲಿ ಇದ್ದು, ಅ ಕಾರ್ಖಾನೆಗಳಲ್ಲಿ ಎಲ್‌ಪಿಜಿ ಮತ್ತು ಪೆಟ್ರೋಲಿಯಂಗಳ ಸ್ವೀಕರಣೆ, ಸಾಗಾಣಿಕೆ ಮಾಡಿ ಸಿಲಿಂಡರ್ ಅಥವಾ ಟ್ಯಾಂಕರ್‌ಗಳಲ್ಲಿ ತುಂಬಿಸಿ ಗ್ರಾಹಕರಿಗೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ತುರ್ತು ಅವಘಡಗಳ ಸಂದರ್ಭದಲ್ಲಿ ರಕ್ಷಣಾತ್ಮಕ ಕಾರ್ಯ ನಡೆಸಲು ಅಣಕು ಪ್ರದರ್ಶನ ನಡೆಸುವ ಸಂಬಂಧ ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆದಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್‌ಡಿಅರ್‌ಎ್ ವತಿಯಿಂದ ಹೊಸಕೋಟೆ ತಾಲೂಕಿನ ದೇವನಗುಂದಿ ಕೈಗಾರಿಕಾ ಪ್ರದೇಶದ ಐಒಸಿಎಲ್ ಎಲ್‌ಪಿಜಿ ಬಾಟ್ಲಿಂಗ್‌ಪ್ಲಾಂಟ್‌ನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಫೆ.20 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅ್ಸೈಟ್ ತುರ್ತು ರಾಸಾಯಿನಿಕ ಸೋರಿಕೆ ಅಣುಕು ಪ್ರದರ್ಶನ ನಡೆಸಲಾಗುವುದು ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ಮತ್ತು ಟೇಬಲ್ ಟಾಪ್‌ತರಬೇತಿ ಸಭೆ ನಡೆಸಲಾಗಿದ್ದು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕಂಪನಿಯ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಸ್ತುತ ಜಿಲ್ಲೆಯಲ್ಲಿ 15 ಅಪಾಯಕಾರಿಯಾದ ಕಾರ್ಖಾನೆಗಳನ್ನು ಗುರುತಿಸಿದ್ದು, ಈ ಕಾರ್ಖಾನೆಗಳಲ್ಲಿ ಎಲ್ಪಿಜಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಬಿಪಿಸಿಎಲ್, ಎಲ್.ಟಿ.ಡಿ, ಎಂ.ಪಿ.ಸಿ.ಎಲ್ ಎಲ್.ಟಿ.ಡಿ ಬಾಟ್ಲಿಂಗ್ ಪ್ಲಾಂಟ್, ಎಲ್.ಟಿ.ಡಿ ಕಾರ್ಖಾನೆಯಲ್ಲಿ 6650 ಮೆಟ್ರಿಕ್ ಟನ್ ಶೇಖರಣೆ ಮಾಡಿ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಈ ಕಾರ್ಖಾನೆಯು ಜಿಲ್ಲೆಯಲ್ಲಿ ಅತೀ ಅಪಾಯಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

200 ಕಾರ್ಮಿಕರಿಗೆ ಪುನರ್‌ವಸತಿ ಕೇಂದ್ರ: ಈ ಅಣುಕು ಪ್ರದರ್ಶನದಲ್ಲಿ ಎಂಎಸ್‌ಎಲ್‌ಪಿಜಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಬಿ.ಪಿ.ಸಿ.ಎಲ್ ಎಲ್.ಟಿ.ಡಿ, ಎಂ.ಪಿ.ಸಿ.ಎಲ್ ಎಲ್.ಟಿ.ಡಿ ಕಾರ್ಖಾನೆಯ 20 ಕಾರ್ಮಿಕರಿಗೆ ತೊಂದರೆ ಆಗುವಂತೆ ಘಟನಾವಳಿಯನ್ನು ರೂಪಿಸಲಾಗುತ್ತದೆ. ಈ ರಾಸಾಯನಿಕ ದುರಂತ ಅಣುಕು ಪ್ರದರ್ಶನದಿಂದ 3 ಕಾರ್ಖಾನೆಗಳಿಂದ ಸುಮಾರು 200 ಕಾರ್ಮಿಕರನ್ನು ಸ್ಥಳಾಂತರಿಸಿ ಹತ್ತಿರದ ಪುನರ್‌ವಸತಿ ಕೇಂದ್ರ (ರಿಹಾಬಿಲೇಶನ್‌ಸೆಂಟರ್)ಅಲ್ಲಿ ಇರಿಸಲು ನಿರ್ಧರಿಸಲಾಗಿದೆ. ನೈಸರ್ಗಿಕ ವಿಕೋಪಗಳು, ಕೈಗಾರಿಕಾ ಪ್ರದೇಶ ವ್ಯಾಪ್ತಿಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು, ವಿಕೋಪಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಲು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಅಣುಕು ಪ್ರದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ರಾಜೀವ್ ಸುಲೋಚನ ತಿಳಿಸಿದರು.

ಪ್ರತಿ ವರ್ಷ ಪ್ರದರ್ಶನ: ಡಿ.4 ರಂದು ರಾಸಾಯನಿಕ ಸೋರಿಕೆ ನಿರ್ವಹಣಾ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಅಣುಕು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಅಣುಕು ಪ್ರದರ್ಶನ ಆಗುವಂತಹ ಸಂದರ್ಭದಲ್ಲಿ ಅವಶ್ಯಕತೆ ಇರುವ ತುರ್ತು ಆಂಬುಲೆನ್ಸ್ ಹಾಗೂ ಆರೋಗ್ಯ ಸೇವೆ, ಅಗ್ನಿ ಶಾಮಕದಳ, ಟ್ರಾಫಿಕ್ (ವಾಹನ ದಟ್ಟಣೆ)ನಿಯಂತ್ರಣ ಹಾಗೂ ಬಂದೋಬಸ್ತ್ ವ್ಯವಸ್ಥೆಗೆ, ಇತರೆ ಇಲಾಖೆಗಳ ಜವಾಬ್ದಾರಿಗಳನ್ನು ತಿಳಿಸಲಾಯಿತು.

ಕಂಪನಿ ಮುಖ್ಯಸ್ಥರು ಭಾಗಿ:

ಕಾರ್ಖಾನೆಗಳು ಹಾಗೂ ಬಾಯ್ಲರ್‌ಗಳ ಜಂಟಿ ನಿರ್ದೇಶಕ ನವನೀತ್‌ಮೋಹನ್, ಹೊಸಕೋಟೆ ವ್ಯಾಪ್ತಿಯ ಕಾರ್ಖಾನೆಗಳ ಉಪನಿರ್ದೇಶಕ ನರಸಿಂಹ ಮೂರ್ತಿ, ಕಾರ್ಖಾನೆಗಳ ದೇವನಹಳ್ಳಿ ವ್ಯಾಪ್ತಿಯ ಉಪನಿರ್ದೇಶಕ ಸೋಮಶೇಖರ್, ನೆಲಮಂಗಲ ವ್ಯಾಪ್ತಿಯ ಕಾರ್ಖಾನೆಗಳ ಉಪನಿರ್ದೇಶಕರಾದ ತಿಮ್ಮರಾಜು ಮತ್ತಿತರರು ಪಾಲ್ಗೊಂಡಿದ್ದರು.