ಮಡಿಕೇರಿ: ರಾಜ್ಯ ಮತ್ತು ಬಹುಸಂಖ್ಯಾತ ಸಮುದಾಯಗಳು ಕೊಡವರಂತಹ ಆದಿಮಸಂಜಾತ ಸಮುದಾಯಗಳ ಅನನ್ಯ ಅಸ್ಮಿತೆ ಸಾಂಸ್ಕೃತಿಕ, ಭಾಷಿಕ, ಸಾಂಪ್ರದಾಯಿಕ ಹಕ್ಕುಗಳನ್ನು ಗುರುತಿಸಬೇಕು ಮತ್ತು ರಕ್ಷಿಸಬೇಕು. ಸಂವಿಧಾನೇತರ ಶಕ್ತಿಗಳು ಸರ್ಕಾರಿ ವ್ಯವಹಾರಗಳಲ್ಲಿ ಅಥವಾ ಕೊಡವರ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಂವಿಧಾನಿಕ ಆಡಳಿತವನ್ನು ಎತ್ತಿಹಿಡಿಯುವ ಮತ್ತು ಆದಿಮಸಂಜಾತ ಕೊಡವ ಸಮುದಾಯದ ಹಕ್ಕುಗಳನ್ನು ರಕ್ಷಿಸುವ ಮಹತ್ವವನ್ನು ಸಿಎನ್‌ಸಿ ಒತ್ತಿ ಹೇಳುತ್ತದೆ. ಕೊಡವರಂತಹ ಆದಿಮಸಂಜಾತ ಸಮುದಾಯಗಳು ಸೇರಿದಂತೆ ಎಲ್ಲಾ ನಾಗರೀಕರ ಸುರಕ್ಷತೆ, ರಕ್ಷಣೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವುದು ರಾಜ್ಯದ ಕರ್ತವ್ಯವಾಗಿದೆ. ಬಹುಸಂಖ್ಯಾತ ಸಮುದಾಯಗಳು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳು, ಸ್ವಾಭಿಮಾನ ಮತ್ತು ಗುರುತನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು. ಬಹುಸಂಖ್ಯಾತರ ಜನಸಂಖ್ಯಾ ತೂಕದ ಮೂಲಕ ಬೆದರಿಕೆ ಅಥವಾ ಪ್ರಾಬಲ್ಯ ಹೇರುವುದನ್ನು ತಪ್ಪಿಸಬೇಕು. ವಿಧಿ ೨೧ ರಡಿ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯಾಗಬೇಕು. ವಿಧಿ ೩೭೧ ರಡಿ ಕೊಡವಲ್ಯಾಂಡ್ ಇರುವ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಿಗೆ ವಿಶೇಷ ನಿಬಂಧನೆಗಳು ಅನ್ವಯವಾಗಬೇಕು ಎಂದು ತಿಳಿಸಿದ್ದಾರೆ.
ಆದಿಮಸಂಜಾತ ಕೊಡವರ ಸ್ವಯಂ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಭವಿಷ್ಯವನ್ನು ನಿರ್ಧರಿಸಿ ಅವರ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಸಂರಕ್ಷಿಸಬೇಕು. ತಾರತಮ್ಯ ಅಥವಾ ಕಡೆಗಣಿಸುವಿಕೆಯಿಂದ ಮುಕ್ತವಾಗಿ ಸಮಾನತೆ ಮತ್ತು ನ್ಯಾಯವನ್ನು ಪಡೆಯುವ ಹಕ್ಕನ್ನು ಕೊಡವರು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.