ಜಿಲ್ಲೆ

ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನ ಎನ್.ಯು.ನಾಚಪ್ಪ ಆರೋಪ

ಮಡಿಕೇರಿ: ಕುಲಶಾಸ್ತ್ರ ಅಧ್ಯಯನದ ಹೆಸರಿನಲ್ಲಿ ನೈಜ ಕೊಡವರನ್ನು ವಂಚಿಸಿ ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನಕ್ಕೆ ಸರ್ಕಾರ ಮುಂದಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾಷಿಕರ ಪ್ರತ್ಯೇಕ ವ್ಯಕ್ತಿತ್ವದ ಹೆಸರಿನಲ್ಲಿ ಕುಲಶಾಸ್ತ್ರದ ಅಧ್ಯಯನ ನಡೆಸಲಿ, ಆದರೆ ಅವರ ಅಸಲಿಯತ್ತನ್ನು ಮರೆಮಾಚಿ (ಕ್ಯಾಮೋಫ್ಲೋಜ್) ಕೊಡವ ಮುಖವಾಡ ತೊಡಿಸುವ ಮೂಲಕ ಸಾಂಸ್ಕೃತಿಕ ವಂಚನೆಯನ್ನು ನಿಲ್ಲಿಸಬೇಕು. ಸರ್ಕಾರದ ನಡೆ ಸಂವಿಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ. ಮುಖ್ಯಮಂತ್ರಿಗಳು ಕೊಡವ ವಿರೋಧಿ ಎಂಬ ಕಳಂಕ ಹೊತ್ತುಕೊಳ್ಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಕೊಡವರ ಕುಲ ಶಾಸ್ತ್ರ ಅಧ್ಯಯನಕ್ಕೆ ಸಂಬಂಧಿಸಿದ ಕಡತ ಕಳೆದ ಆಗಸ್ಟ್ ತಿಂಗಳಿನಿಂದ ಮುಖ್ಯಮಂತ್ರಿಗಳ ಬಳಿಯೇ ಉಳಿದಿದೆ. ನೈಜ ಕೊಡವರ ಅಧ್ಯಯನಕ್ಕೆ ತಕ್ಷಣ ಚಾಲನೆ ನೀಡುವ ಮೂಲಕ ಈ ಕಡತಕ್ಕೆ ಜೀವ ತುಂಬಬೇಕು ಎಂದು ಒತ್ತಾಯಿಸಿದ್ದಾರೆ.


ಕೊಡವ ಬ್ಯ್ರಾಂಡ್ ಎಲ್ಲರಿಗೂ ಬೇಕು, ಆದರೇ ಮೂಲ ಕೊಡವ ರೇಸ್ ಯಾರಿಗೂ ಬೇಡ. ಕೊಡವರಿಗೆ ಸಂವಿಧಾನಿಕವಾಗಿ ಯಾವುದೂ ದೊರೆಯಬಾರದು ಎನ್ನುವ ಸಂಚು ನಡೆಯುತ್ತಿದೆ. ಕೊಡವರೇ ಬೇರೆ, ಭಾಷಿಕರೇ ಬೇರೆ. ಕೊಡವ ವಂಶವಾಹಿ ಅಂತರ್ಗತವೇ ಬೇರೆ, ಕೊಡವ ಅನುಕರಣೆಯೇ ಬೇರೆ. ಕೊಡವರ ಹಿರಿಮೆ ಗರಿಮೆಯನ್ನು ಹೊಗಳುತ್ತಾ ರಾಷ್ಟ್ರ ರಕ್ಷಣೆ ಮತ್ತು ದೇಶ ಕಟ್ಟುವ ಕಾರ್ಯಕ್ಕೆ ಅಪರಿಮಿತ ಕಾಣಿಕೆ ನೀಡಿದ ಕೊಡವರನ್ನು ಕೊಂಡಾಡುವ ನಾಟಕವಾಡುತ್ತಾ ಕೊಡವ ಬ್ಯ್ರಾಂಡ್ ನ ದುರ್ಬಳಕೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.


ಮುಖ್ಯಮಂತ್ರಿಗಳ ಕಛೇರಿಯಲ್ಲಿ ಕಳೆದ ೬ ತಿಂಗಳಿನಿಂದ ಕೊಳೆಯುತ್ತಾ ಬಿದ್ದಿರುವ ಕೊಡವರ ಕುಲ ಶಾಸ್ತ್ರ ಅಧ್ಯಯನದ ಹಕ್ಕನ್ನು ಕಸಿದುಕೊಂಡು ಅಸಲಿ ಮುಖ ಮರೆಮಾಚಿ ಕೊಡವ ಮುಖವಾಡದ ಮೂಲಕ ವಂಚನೆಗೆ ಇಳಿದಿರುವುದು ಸಾಬೀತಾಗುತ್ತಿದೆ. ಕೊಡವ ಹೃದಯ ಭಾಗದ (ಕೊಡವ ಜನಸಂಖ್ಯಾ ಬಾಹುಳ್ಯದ) ಜನಪ್ರತಿನಿಧಿ ಹಾಗೂ ವಕ್ರ ಇತಿಹಾಸ ರಚನೆಯ ಪಂಡಿತರೊಬ್ಬರ ಅಪವಿತ್ರ ಮೈತ್ರಿ ಈ ಬೆಳವಣಿಗೆಗೆ ಕಾರಣ ಎಂದು ನಾಚಪ್ಪ ಆರೋಪಿಸಿದ್ದಾರೆ.


ಸಂವಿಧಾನ ಶಿಲ್ಪಿ ಡಾ॥ ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸರ್ವ ಜನರ ಕಲ್ಯಾಣಕ್ಕಾಗಿ ರಚಿಸಿದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ನಡೆಸುವವರು ಸಂವಿಧಾನಿಕ ಆಶಯಕ್ಕೆ ಅಪಚಾರವೆಸಗಬಾರದು. ಕೊಡವ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಮರು ಅಧ್ಯಯನಕ್ಕೆ ಆದೇಶ ಮಾಡುವ ಮೂಲಕ ನೈಜ ಕೊಡವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.