ಸುಬ್ರಹ್ಮಣ್ಯ: ಸಿಪಿಆರ್ ಕಾರ್ಡಿಯೋ ಪಲ್ಮನರಿ ಪುನರುಜ್ಜೀವನ ಎನ್ನುವುದು ಜೀವ ರಕ್ಷಕ ತಂತ್ರ. ಹೃದಯಾಘಾತ ಅಥವಾ ಹೃದಯಘಾತಕ್ಕೆ ಸಮೀಪವಿರುವಂತಹ ಅನೇಕ ತುರ್ತು ಸಂದರ್ಭಗಳಲ್ಲಿ ಇದು ಉಪಯುಕ್ತವಾಗಿದೆ. ಸಿಪಿಆರ್ ನೀಡುವುದರಿಂದ ಹೃದಯವು ಪಂಪ್ ಮಾಡಲು ಪ್ರಾರಂಭಿಸಿ ದೇಹದಲ್ಲಿ ರಕ್ತ ಹರಿಯಲು ಪ್ರಾರಂಭಿಸುತ್ತದೆ. ಈ ವಿಧಾನದಿಂದ ಹೃದಯ ಸ್ತಂಭನದಿಂದ ವ್ಯಕ್ತಿಯ ಜೀವ ಉಳಿಸಬಹುದಾಗಿದೆ ಎಂದು ಮಂಗಳೂರಿನ ಕೆಎಂಸಿ ತುರ್ತು ಚಿಕಿತ್ಸಾ ಘಟಕದ ವೈದ್ಯ ಡಾ.ಪವನ್ ಆರ್.ಸಾಗರ್ ಹೇಳಿದರು.
ರೋಟರಿ ಕ್ಲಬ್ ಸುಬ್ರಹ್ಮಣ್ಯ ಆಶ್ರಯದಲ್ಲಿ ಕೆಎಸ್‌ಎಸ್ ಕಾಲೇಜಿನ ಯೂತ್ ರೆಡ್‌ಕ್ರಾಸ್, ರೋವರ್ಸ್-ರೆಂಜರ್ಸ್ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶುಕ್ರವಾರ ಕಾರ್ಡಿಯೋ ಪಲ್ಮನರಿ ಪುನರುಜ್ಜೀವನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ ಸೇನಾನಿ ವಿಶ್ವನಾಥ ನಡುತೋಟ, ರೋಟರಿ ಪೂರ್ವ ಸಹಾಯಕ ಗವರ್ನರ್ ಶಿವರಾಮ ಯೇನೆಕಲ್, ರೋಟರಿ ಸದಸ್ಯ ನವೀನ್ ವಾಲ್ತಾಜೆ, ಕಾಲೇಜಿನ ಉಪನ್ಯಾಸಕರಾದ ರಾಮಪ್ರಸಾದ್, ಆರತಿ ಇದ್ದರು.