ಜೆ.ಎಸ್.ಎಸ್. ಕಲಾ, ವಾಣಿಜ್ಯ, ಮತ್ತು ವಿಜ್ಞಾನ ಕಾಲೇಜಿನ ವತಿಯಿಂದ ಹುಣಸೂರು ತಾಲೂಕಿನ ಕೆ.ಎಸ್. ಗದ್ದಿಗೆಯಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್. ಶಿಬಿರದ ಸಮಾರೋಪದಲ್ಲಿ ಉತ್ತಮ ಸ್ವಯಂ ಸೇವಕರಿಗೆ ಸಾಹಿತಿ ಟಿ. ಸತೀಶ್ ಜವರೇಗೌಡ ಪ್ರಶಸ್ತಿ ಪ್ರದಾನ ಮಾಡಿದರು. ಎನ್. ಕುಂಟೇಗೌಡ, ರಂಗಕರ್ಮಿ ಚಂದ್ರು ಮಂಡ್ಯ, ಜಿ.ಆರ್. ಶಶಿಕಲಾ, ಎನ್. ಸಂತೋಷ್ ಕುಮಾರ್ ಇದ್ದರು. 
ಜಿಲ್ಲೆ

ಗ್ರಾಮೀಣ ಅಭಿವೃದ್ಧಿಗೆ ಎನ್‌ಎಸ್‌ಎಸ್ ಪೂರಕ : ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯ

ಮೈಸೂರು: ರಾಷ್ಟ್ರೀಯ ಸೇವಾ ಯೋಜನೆಯು ಗ್ರಾಮೀಣ ಅಭಿವೃದ್ಧಿಗೆ ಪ್ರೇರಕ ಹಾಗೂ ಪೂರಕವಾಗಿದ್ದು, ವಿದ್ಯಾರ್ಥಿಗಳಲ್ಲಿ ಶ್ರಮ ಸಂಸ್ಕೃತಿ ಮತ್ತು ಸ್ವಚ್ಛತಾ ಮೌಲ್ಯ ಬೆಳೆಸುತ್ತದೆ ಎಂದು ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.

ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವತಿಯಿಂದ ಹುಣಸೂರು ತಾಲೂಕಿನ ಕೆ.ಎಸ್. ಗದ್ದಿಗೆಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಎನ್‌ಎಸ್‌ಎಸ್ ಸೇರುವುದರಿಂದ ಸೇವಾ ಮನೋಭಾವ, ನಾಯಕತ್ವದ ಗುಣ, ಸಹಕಾರ ಮತ್ತು ಸಾಮರಸ್ಯದ ದೃಷ್ಟಿ, ಕಾಯಕ ಪ್ರೀತಿ ಬೆಳೆಯುತ್ತದೆ. ವಿದ್ಯಾರ್ಥಿಗಳ ಆತ್ಮೋನ್ನತಿಯೂ ಸಾಧ್ಯವಾಗುತ್ತದೆ ಎಂದರು.

ಪರಿಸರದ ಮೇಲೆ ಮಾನವ ಎಸಗಿದ ದೌರ್ಜನ್ಯದ ದುಷ್ಫಲವಾಗಿ ಅಕಾಲಿಕ ಬರಗಾಲ ಮತ್ತು ಜಲಕ್ಷಾಮ ಉಂಟಾಗಿದೆ. ಇಂತಹ ದುರಿತ ಕಾಲದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಿ, ಅದರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಹುಣಸೂರು ತಾಲೂಕು ಘಟಕದ ಅಧ್ಯಕ್ಷ ಟಿ.ಲೋಕೇಶ್ ಮಾತನಾಡಿ, ಇಂದು ಸಮಾಜದಲ್ಲಿ ಭ್ರಷ್ಟಾಚಾರ, ಜಾತೀಯತೆ, ಕೊಲೆ, ಸುಲಿಗೆ, ವಂಚನೆ ಹೆಚ್ಚಿವೆ. ಮಾನವೀಯ ಮೌಲ್ಯಗಳು ಕಾಣೆಯಾಗಿವೆ. ನಮ್ಮ ಸುತ್ತಲಿನವರ ಕಷ್ಟಗಳಿಗೆ ಸ್ಪಂದಿಸುವ ಗುಣವಿಲ್ಲ. ಅಮಾನವೀಯತೆ ವಿಜೃಂಭಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಉತ್ತಮ ಸೇವೆ ಸಲ್ಲಿಸಿದ ಸ್ವಯಂ ಸೇವಕ ವಿದ್ಯಾರ್ಥಿಗಳಾದ ಎಸ್.ಎಂ.ಅನನ್ಯಾ, ಎಚ್.ಎಸ್.ಪ್ರನುಷ, ಆರ್.ಕಿರಣ್ ಅವರಿಗೆ ‘ಎನ್‌ಎಸ್‌ಎಸ್ ವೀರಕೇಸರಿ’ ಮತ್ತು ‘ಎನ್‌ಎಸ್‌ಎಸ್ ಶಿಶಿರ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮುಖಂಡರಾದ ವೆಂಕಟೇಗೌಡ, ಎನ್.ಕುಂಟೇಗೌಡ, ರಂಗಕರ್ಮಿ ಚಂದ್ರು ಮಂಡ್ಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಜಿ.ಆರ್. ಶಶಿಕಲಾ, ಶಿಬಿರಾಧಿಕಾರಿ ಎನ್.ಸಂತೋಷ್ ಕುಮಾರ್, ಸಹ ಶಿಬಿರಾಧಿಕಾರಿ ಡಾ.ಬಿ.ಎಲ್.ಕಿರಣ್, ಗಾಯಕ ಮರಿಸ್ವಾಮಿ ಹಂಸ ಇದ್ದರು.