ರಿಪ್ಪನ್‌ಪೇಟೆ: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸಲು ಪೂರಕವಾಗಿವೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಗೋಪಿನಾಥ್ ಹೇಳಿದರು.
ಪಟ್ಟಣದ ವಿಶ್ವಮಾನವ ಸಮುದಾಯ ಭವನದಲ್ಲಿ ಶನಿವಾರ ಕುವೆಂಪು ಶತಮಾನೋತ್ಸವ ಮಹಾವಿದ್ಯಾಲಯ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ಪಠ್ಯ ಬೋಧನೆಯ ಜತೆಗೆ ವಿದ್ಯಾರ್ಥಿಗಳಿಗೆ ಸಮಾಜ ರೂಪಿಸುವ ಜವಾಬ್ದಾರಿ ಹೇಳಿಕೊಡ ಬೇಕಿರುವುದು ಶಿಕ್ಷಣದ ಕರ್ತವ್ಯವಾಗಿದೆ. ಇದರ ಭಾಗವಾಗಿ ಹಲವು ವರ್ಷಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪರಿಸರ, ಸಾಂಸ್ಕೃತಿಕ, ಸಾಮಾಜಿಕ, ಕಾನೂನಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.
ಶಿಬಿರದಲ್ಲಿ ಭಾಗಿಗಳಾಗಿ ಲಾಭವನ್ನು ಪಡೆದುಕೊಂಡ ಸಾವಿರಾರು ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಂಡಿದ್ದಾರೆ. ಶಿಬಿರದಲ್ಲಿ ಪಡೆದ ತಿಳಿವಳಿಕೆ ಮತ್ತು ಜ್ಞಾನವನ್ನು ಸಮಾಜದ ಇತರ ವರ್ಗಗಳಲ್ಲಿ ಪ್ರಚುರ ಪಡಿಸುವ ಮೂಲಕ ವಿದ್ಯಾರ್ಥಿಗಳು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಹೇಳಿದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಮಾತನಾಡಿ, ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಬಹಳ ದೊಡ್ಡ ದುಷ್ಪರಿಣಾಮವನ್ನು ಎದುರಿಸುತ್ತಿದ್ದೇವೆ. ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವಾಗಿದ್ದರೂ ಬಳಕೆ ಮಾತ್ರ ನಿಂತಿಲ್ಲ. ಆದ್ದರಿಂದ ಏಕಬಳಕೆಯ ಪ್ಲಾಸ್ಟಿಕ್‌ನ ಉತ್ಪಾದನೆ ನಿಲ್ಲಿಸಲು ಆಂದೋಲನವೇ ಆಗಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಆಗುವುದಿದೆ ಎಂದು ಎಚ್ಚರಿಸಿದ ಅವರು, ಪತ್ರಗಳ ಮೂಲಕ ಸರ್ಕಾರದ ಕಣ್ಣು ತೆರೆಸುವ ಕಾರ್ಯ ಮಾಡಿ ಎಂದು ವೇದಿಕೆಯ ಮೇಲಿದ್ದ ಗಣ್ಯರಲ್ಲಿ ಮನವಿ ಮಾಡಿಕೊಂಡರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಪಿ.ಆದಿಮೂರ್ತಿ, ತಾಲೂಕು ಅಧ್ಯಕ್ಷ ಎಚ್.ವಿ.ಹರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್, ಸ್ಥಳೀಯ ನಿರ್ದೇಶಕ ಬಿ.ಎಚ್.ಷಣ್ಮುಖಪ್ಪ ಗೌಡ, ಕಸಾಪ ತಾಲೂಕು ಅಧ್ಯಕ್ಷ ತ.ಮ.ನರಸಿಂಹ, ಪ್ರಾಚಾರ್ಯ ಡಾ. ಜಿ.ಮಧು, ಶಿಬಿರಾಧಿಕಾರಿ ಎನ್.ಜೆ.ಪ್ರಕಾಶ್ ಇತರರಿದ್ದರು.
ಬದುಕನ್ನು ರೂಪಿಸುವ ಕಲೆ
ಸೇವಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಬದುಕನ್ನು ರೂಪಿಸುವ ಕಲೆಯನ್ನು ಹೇಳಿಕೊಡುತ್ತವೆ ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು. ಸಮಾಜದ ಜತೆ ನೀವು ಹೇಗೆ ಬೆರೆಯುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ರೂಪಿತವಾಗಿದೆ. ಇದನ್ನರಿತ ವಿದ್ಯಾರ್ಥಿಗಳು ಸಮಾಜದ ಅನೇಕ ಭಿನ್ನಾಭಿಪ್ರಾಯಗಳ ಮಧ್ಯೆ ಮನಸ್ಸುಗಳನ್ನು ಬೆಸೆಯುವ ಕಾರ್ಯ ಮಾಡುವುದು ಅಗತ್ಯ ಎಂದರು. ರಾಷ್ಟ್ರ ಕವಿ ಕುವೆಂಪು ಅವರು ಹೇಳಿದಂತೆ ಮಕ್ಕಳು ಭತ್ತ ತುಂಬುವ ಕಣಜ ಆಗಬಾರದು. ಬದಲಿಗೆ ಭತ್ತ ಬಿತ್ತುವ ಗದ್ದೆಗಳಾಗಬೇಕು. ಆಗ ಮಾತ್ರ ಮೊಳಕೆಯೊಡೆಯುವ ಸಂದರ್ಭದಿಂದ ಸುಗ್ಗಿವರೆಗಿನ ಎಕ್ಕ ಸುಖ, ಕಷ್ಟಗಳು ಅರ್ಥವಾಗಿ ಮನಸ್ಸು ಸಂಪತ್ಭರಿತವಾಗುತ್ತದೆ. ವಿಶ್ವಮಾನವ ಸಂದೇಶದಿಂದ ಜನರು ದೂರ ಹೋಗುತ್ತಿರುವ ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಸಮಾಜದ ಚಿಕಿತ್ಸರಾಗಿ ಕಾರ್ಯನಿರ್ವಹಿಸಬೇಕು. ಯುವ ವಯಸ್ಸಿನಲ್ಲಿ ಮಾದಕ ವ್ಯವಸನಗಳಿಗೆ ಬಲಿಯಾಗದೆ ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.