ಜಿಲ್ಲೆ

ಸಮಾಜಸೇವೆಯಲ್ಲಿರಲಿ ಶ್ರಮ, ಶ್ರದ್ಧೆ...

ಪ್ರಾಧ್ಯಾಪಕ ಡಾ. ರಘು ನಾಯ್ಕ ಆಶಯ

ಎನ್​ಎಸ್​ಎಸ್​ ದಿನಾಚರಣೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಎನ್​ಎಸ್​ಎಸ್​ನಲ್ಲಿ ತೊಡಗಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಜ್ಞಾನ ಹಾಗೂ ಮೌಲ್ಯದ ಅರಿವು ಉಂಟಾಗುತ್ತದೆ. ಸಮಾಜ ಸೇವೆಯತ್ತ ಯುವತಿಯರೂ ಭಾಗಿಯಾಗುತ್ತಿದ್ದು, ಶ್ರಮ ಮತ್ತು ಶ್ರದ್ಧೆಯಿಂದ ತೊಡಗಿಕೊಳ್ಳಬೇಕು. ನಾಟ್​ ಮೀ, ಬಟ್​ ಯು ಎಂಬ ಎನ್​ಎಸ್​ಎಸ್​ನ ಆಧ್ಯಾತ್ಮಿಕ ನುಡಿ ಪಾಲಿಸಬೇಕು ಎಂದು ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ. ರಘು ನಾಯ್ಕ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೊತ್ತರ ಅಧ್ಯಯನ ಕೇಂದ್ರದಲ್ಲಿ ಸೆಪ್ಟೆಂಬರ್​ 24ರಂದು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಕಾರ್ಯಕ್ರಮ ಹಾಗೂ ಎನ್​ಎಸ್​ಎಸ್​ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಎನ್​ಎಸ್​ಎಸ್​ ಘಟಕ-1ರ ಸಂಯೋಜನಾಧಿಕಾರಿ ಡಾ. ಜಯಮಂಗಲಾ ಸ್ವಾಗತಿಸಿ, ವಿದ್ಯಾರ್ಥಿನಿಯರೂ ಸಹ ಸಮಾಜಸೇವೆ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳುವ ಅಗತ್ಯತೆ ಇದೆ ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಪ್ರೊ. ನಿಕೇತನಾ ಮಾತನಾಡಿ, ಎನ್​ಎಸ್​ಎಸ್​ನಿಂದ ಸಮಾಜದೊಂದಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಯುತ್ತದೆ, ಅಲ್ಲದೆ, ಜವಾಬ್ದಾರಿತನ ಮತ್ತು ಶಿಸ್ತಿನ ಮಹತ್ವವೂ ತಿಳಿಯುತ್ತದೆ ಎಂದರು.

ಐಕ್ಯುಎಸಿ ಸಂಯೋಜಕಿ ಪ್ರೊ. ಶ್ರೀಮತಿ ಅಡಿಗ ಮಾತನಾಡಿದರು. ಪ್ರಭಾರ ಪ್ರಾಂಶುಪಾಲ ಪ್ರೊ. ಕೃಷ್ಣ ಭಟ್​ ಅಧ್ಯಕ್ಷತೆ ವಹಿಸಿದ್ದರು.

ಎನ್​ಎಸ್​ಎಸ್​ ಘಟಕ-2ರ ಸಂಯೋಜನಾಧಿಕಾರಿ ಡಾ. ರವೀಶ ಬಿ. ವಂದಿಸಿದರು. ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು.