ಕೆ.ಆರ್.ನಗರ ತಾಲೂಕಿನ ಲಾಲನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು. 
ಜಿಲ್ಲೆ

ಬೌದ್ಧಿಕ ವಿಕಾಸಕ್ಕೆ ಎನ್‌ಎಸ್‌ಎಸ್ ಶಿಬಿರ ಸಹಕಾರಿ

ನಾಗೇಶ ಎಸ್

ಕೆ.ಆರ್.ನಗರ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಶಿಸ್ತಿನ ಜತೆಗೆ ಅನುಭವವನ್ನು ಪಡೆಯಬಹುದು ಎಂದು ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್ ಹೇಳಿದರು.

ತಾಲೂಕಿನ ಲಾಲನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಆಯೋಜಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾನುವಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿನ ಜತೆಗೆ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಬೌದ್ಧಿಕ ವಿಕಾಸಕ್ಕೆ ಕಾರಣವಾಗಲಿದೆ ಎಂದರು.

ಕಾಲೇಜಿನ ವತಿಯಿಂದ ಏಳು ದಿನಗಳವರೆಗೆ ಗ್ರಾಮದಲ್ಲಿ ಎನ್‌ಎಸ್‌ಎಸ್ ಶಿಬಿರ ಹಮ್ಮಿಕೊಂಡಿದ್ದು, ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರಿಗೂ ಗ್ರಾಮೀಣ ಜನಜೀವನದ ಅನುಭವ ಆಗುವುದರ ಜತೆಗೆ ಅವರ ಸಂಕಷ್ಟವೂ ಅರ್ಥವಾಗಲಿದೆ. ಈ ಅನುಭವವನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಖಿಲ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು ಮಾತನಾಡಿ, ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಗ್ರಾಮದಲ್ಲಿ ಎನ್‌ಎಸ್‌ಎಸ್ ಶಿಬಿರ ಆಯೋಜಿಸಿರುವುದು ಎಲ್ಲರಿಗೂ ಸಂತಸದ ವಿಚಾರವಾಗಿದೆ. ನಾವು ಶಿಬಿರ ನಡೆಯುವ ದಿನಗಳಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಪ್ರಾಂಶುಪಾಲೆ ಡಾ.ಬಿ.ಎಸ್.ಜಯಾ ಮಾತನಾಡಿ, ಕಾಲೇಜು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಅಭ್ಯಾಸದ ಜತೆಗೆ ಸಾರ್ವಜನಿಕ ಜೀವನದ ಅನುಭವ ಪಡೆಯಲು ಮತ್ತು ಹಿಂದುಳಿದ ಗ್ರಾಮಗಳಿಗೆ ತೆರಳಿ ಅವರಿಗೆ ಅರಿವು ಮೂಡಿಸಲು 50 ವರ್ಷಗಳ ಹಿಂದಿನಿಂದ ಎನ್‌ಎಸ್‌ಎಸ್ ಶಿಬಿರ ನಡೆಸುವ ಕೆಲಸ ಮಾಡುತ್ತಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಪಂ ಸದಸ್ಯರಾದ ಉಮೇಶ್, ಗುರು, ಎಸ್‌ಡಿಎಂಸಿ ಅಧ್ಯಕ್ಷ ಮಹದೇವಪ್ಪ, ಶಾಲಾ ಮುಖ್ಯ ಶಿಕ್ಷಕ ರೇವಣ್ಣ, ಶಿಬಿರಾಧಿಕಾರಿಗಳಾದ ಎಂ.ವಿ.ರಾಘವೇಂದ್ರ, ಎಂ.ಮಮತಾ, ಮೂಲೆಪೆಟ್ಲು ಪ್ರದೀಪ್, ಎಂ.ವಂದನಾ, ಉಪನ್ಯಾಸಕರಾದ ಬಿ.ಪಿ.ದಯಾನಂದ್, ತಿಪ್ಪೇಸ್ವಾಮಿ, ಮಂಜುನಾಥ್, ಕೃಷ್ಣಮೂರ್ತಿ, ಸಾಗರ್ ಇತರರು ಇದ್ದರು.