ಜಿಲ್ಲೆ

ಗಂಗಿವಾಳದಲ್ಲಿ ಎನ್​ಎಸ್​ಎಸ್ ಶಿಬಿರ

ಹುಬ್ಬಳ್ಳಿ : ನಗರದ ಜೆಎಸ್​ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಗಂಗಿವಾಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುರುವಾರದಂದು ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಡಾ. ಪ್ರತಿಭಾ ಹುಲ್ಲೂರು, ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್​ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ದೀಪಾ ಪಾಟೀಲ ಮಾತನಾಡಿ, ಶಿಸ್ತುಬದ್ಧ ಜೀವನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಯೋಗ, ಧ್ಯಾನದಂತಹ ಅಭ್ಯಾಸಗಳು ಮತ್ತು ಉತ್ತಮ

ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಇಲ್ಲಿನ ಗೋಕುಲ ರಸ್ತೆಯ ಸಂಜೀವಿನಿ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವೈದ್ಯರಾದ ಡಾ. ಸೋಮಶೇಖರ ಹುದ್ದಾರ, ಡಾ. ಪ್ರತಿಭಾ ಹುಲ್ಲೂರು, ಡಾ. ಭಾವನಾ ಭಟ್ ಮತ್ತು ಡಾ. ಮಹಾದೇವಿ ದೇಶಪಾಂಡೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಗಂಗಿವಾಳ ಗ್ರಾಮದ 100 ಕ್ಕೂ ಅಧಿಕ ಜನರು ಶಿಬಿರದ ಲಾಭ ಪಡೆದುಕೊಂಡರು.

ಪ್ರೊ. ಶ್ರೀಶೈಲ ಮುಧೋಳ, ಪ್ರೊ. ಪೂರ್ಣಿಮಾ ಕುರ್ಡಿಕೆರಿ, ಸುರೇಶ ಲಿಂಬಿಕಾಯಿ, ಸತೀಶ ಸಿ.ವಿ. ಹಾಗೂ ಇತರರು ಉಪಸ್ಥಿತರಿದ್ದರು.