ಮಂಡ್ಯ: ಎನ್‌ಎಸ್‌ಎಸ್ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಶಿಸ್ತು, ಸಂಯಮ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತದೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಎಂ.ಬಿ.ಸುರೇಶ್ ತಿಳಿಸಿದರು.
ತಾಲೂಕಿನ ಬಿ.ಹೊಸೂರು ಕಾಲನಿಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹೊರಾವರಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾತನಾಡಿದರು. ಯಾರು ವಿದ್ಯಾರ್ಥಿ ದಿಶೆಯಲ್ಲಿಯೇ ಶಿಸ್ತು, ಸಮಯ ಪ್ರಜ್ಞೆ ಬೆಳೆಸಿಕೊಳ್ಳುತ್ತಾರೋ ಅಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಎನ್‌ಎಸ್‌ಎಸ್ ಶಿಬಿರಗಳ ಆಯೋಜನೆ ಮಾಡಿ ಸ್ವಚ್ಛಗೊಳಿಸುವ ಕೆಲಸ ನಿರ್ವಹಣೆಯಿಂದ ಗ್ರಾಮೀಣ ಜನರಿಗೆ ಅನುಕೂಲವಾಗುತ್ತದೆ. ಜತೆಗೆ ಸುತ್ತಮುತ್ತಲಿನ ಆವರಣ ಸ್ವಚ್ಛವಾಗಿಟ್ಟಿಕೊಳ್ಳುವ ಗುಣ ಬೆಳೆಯುತ್ತದೆ ಎಂದು ತಿಳಿಸಿದರು.
ಶಿಬಿರ ಉದ್ಘಾಟಿಸಿದ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಪಿ.ಎನ್.ಗೀತಾಮಣಿ ಮಾತನಾಡಿ, ಎನ್‌ಎಸ್‌ಎಸ್ ಎನ್ನುವುದು ಮಹಾತ್ಮ ಗಾಂಧೀಜಿ ಅವರ ಸರ್ವೋದಯ ಪರಿಕಲ್ಪನೆಯ ಕೂಸು. ಅಂದಿನ ಕಾಲದಲ್ಲೇ ಅವರು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದ್ದರು. ಹಾಗಾಗಿ ವಿದ್ಯಾರ್ಥಿಗಳು ಇಂತಹ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸಂಯೋಜಕ ಡಾ.ಜಿ.ಎನ್.ಕಿರಣ್ ಅಧ್ಯಕ್ಷತೆ ವಹಿಸಿದ್ದರು.