ಜಿಲ್ಲೆ

ಎಂಜಿಎo ಕಾಲೇಜು ಎನ್‌ಎಸ್‌ಎಸ್ ಶಿಬಿರಕ್ಕೆ ಚಾಲನೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಸುಭದ್ರ ಮತ್ತು ಸಮೃದ್ಧ ರಾಷ್ಟ್ರ ಕಟ್ಟುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರವಹಿಸುತ್ತದೆ ಎಂದು ಕುಶಾಲನಗರದ ಉದ್ಯಮಿ ಸುಘುರಾಜ್ ಹೇಳಿದರು. ಯಡವನಾಡು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಈ ಅವಕಾಶ ಬಳಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಡವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ.ಕೆ. ಬಸವರಾಜು ಮಾತನಾಡಿ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಪಕ್ವತೆ ಹಾಗೂ ಪ್ರಬುದ್ಧತೆಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ಪರಸ್ಪರ ಒಳಿತಿನತ್ತ ಚಿಂತನೆ ನಡೆಸಲು ಹಾಗೂ ಗ್ರಾಮೀಣ ಜನರ ಬದುಕು ಬವಣೆಗಳನ್ನು ಅರಿಯಲು ಮುಂದಾಗಬೇಕು ಎಂದರು.

ಕೊಡಗು ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಮನುಷ್ಯನಿಗೆ ಪ್ರಕೃತಿ ಉಚಿತವಾಗಿ ನೀಡಿರುವ ಗಾಳಿ, ಬೆಳಕು, ಮಣ್ಣು ಹಾಗೂ ನೀರನ್ನು ಮಲಿನವಾಗದಂತೆ ಜೋಪಾನ ಮಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಂದ ನಡೆಯಬೇಕಿದೆ ಎಂದರು.

ಯಡವನಾಡು ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮುಖ್ಯ ಶಿಕ್ಷಕ ಎನ್.ಸಿ. ರಜನಿಕಾಂತ್ ಮಾತನಾಡಿದರು.

ಶಿಬಿರಾಧಿಕಾರಿ ಕೆ.ಆರ್. ಮಂಜೇಶ್ ಶಿಬಿರದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಎನ್.ಎನ್. ನಂಜಪ್ಪ, ಕಾಲೇಜು ಪ್ರಾಂಶುಪಾಲೆ ಟಿ.ಎ.ಲಿಖಿತಾ, ಸಹಶಿಬಿರಾಧಿಕಾರಿ ದಿನೇಶ್ ಕುಮಾರ್, ಉಪನ್ಯಾಸಕರಾದ ನಮಿತ,ದೇವೇಂದ್ರ, ಲಾವಣ್ಯ, ಸಾನಿಯಾ, ಬಿ.ಜೆ.ಭವ್ಯ ಇದ್ದರು.