ಜಿಲ್ಲೆ

ಯಕ್ಷಗಾನ ಹೆಜ್ಜೆ ಕಲಿತ ಎನ್‌ಎಸ್‌ಡಿ ವಿದ್ಯಾರ್ಥಿಗಳು

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ದೆಹಲಿಯ ರಾಷ್ಟ್ರೀಯ ನಾಟ್ಯ ವಿದ್ಯಾಲಯ ಎನ್‌ಎಸ್‌ಡಿಯ ವಿದ್ಯಾರ್ಥಿಗಳು 10 ದಿನಗಳ ಕಾಲ ಪಶ್ಚಿಮಘಟ್ಟ ತಪ್ಪಲಿನ ತಿಂಗಳೆ ಗರಡಿ ಆವರಣದಲ್ಲಿ ತಿಂಗಳೆ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಂದ ಯಕ್ಷಗಾನ ಅಭ್ಯಾಸ ಮಾಡಿದರು.

ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ದೆಹಲಿಯ ರಾಷ್ಟ್ರೀಯ ನಾಟ್ಯ ವಿದ್ಯಾಲಯದೊಂದಿಗೆ ನಿರಂತರ ಸಂಬಂಧ ಹೊಂದಿದ್ದಾರೆ. ದೆಹಲಿ ಎನ್‌ಎಸ್‌ಡಿ ಹಾಗೂ ವಿವಿಧ ರಾಜ್ಯ ಎನ್‌ಎಸ್‌ಡಿಯ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಗೆ ಗುರುಗಳನ್ನು ಅರಸಿಕೊಂಡು ಉಡುಪಿಗೆ ಬಂದಿದ್ದಾರೆ. ರಂಗತಜ್ಞ ಚಿದಂಬರ ರಾವ್ ಜಂಬೆ ಅವರ ಮೂಲಕ ದಶಕಗಳ ಹಿಂದೆ ಆರಂಭಗೊಂಡ ಈ ರಂಗ ಪಯಣ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ.

ಈ ಬಾರಿ ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ವಿಕ್ರಮಾರ್ಜುನ ಹೆಗ್ಡೆ ಮುತುವರ್ಜಿಯಲ್ಲಿ ಶಿಬಿರ ಆಯೋಜನೆಯಾಗಿದೆ. ತಿಂಗಳೆಯಲ್ಲೇ 10 ದಿನಗಳ ಕಾಲ ಶಿಬಿರ ನಡೆಸಿ ಪ್ರತಿಷ್ಠಾನದ ವತಿಯಿಂದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಸಂಗೀತ, ನೃತ್ಯ, ವೇಷಭೂಷಣ ಹೀಗೆ ಯಕ್ಷಗಾನದ ಸಮಗ್ರತೆಗೆ ವಿದ್ಯಾರ್ಥಿಗಳು ಮಾರುಹೋಗಿದ್ದಾರೆ. 30 ಮಂದಿ ಶಿಬಿರದಲ್ಲಿದ್ದು 10 ದಿನಗಳ ಶಿಬಿರ ಮುಗಿಸಿ, ಮುಂದೆ 20 ದಿನ ಯಕ್ಷಗಾನ ತರಬೇತಿ ಹಾಗೂ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಲಿದೆ. ಬನ್ನಂಜೆ ಸಂಜೀವ ಸುವರ್ಣರೇ ಹೆಜ್ಜೆ ಜೊತೆ ಪ್ರಸಂಗದ ಪಾಠ ಮಾಡಲಿದ್ದಾರೆ.

ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರಿಗೆ ಕುಣಿತದಲ್ಲಿ ಅವರ ಶಿಷ್ಯರಾದ ಸುಮಂತ್, ಶಿಶಿರ್ ಸುವರ್ಣ ಹಾಗೂ ಮನೋಜ್ ಸಹಕರಿಸಿದ್ದಾರೆ. ಲಂಬೋದರ ಹೆಗಡೆ ಹಾಗೂ ಶ್ರೀಧರ ಹೆಗಡೆ ಹಿಮ್ಮೇಳದಲ್ಲಿ ಸಾಥ್ ನೀಡುತ್ತಿದ್ದಾರೆ.

ಕೇವಲ 10 ದಿನ ಯಕ್ಷಗಾನ ತರಬೇತಿ ಪಡೆಯಲು ಬಂದ ಮಕ್ಕಳು, ಬೆಂಗಳೂರಿನಲ್ಲಿ ನಾಟಕ ಕಲಿಕೆ ನಡೆಸಬೇಕಾಗಿತ್ತು. ಆದರೆ ಯಕ್ಷಗಾನದ ತರಬೇತಿ ಪಡೆದ ವಿದ್ಯಾರ್ಥಿಗಳು ತಾವು ಯಕ್ಷಗಾನ ಪ್ರಸಂಗವನ್ನೇ ಅಭ್ಯಾಸ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ. ಹಾಗಾಗಿ ನಮ್ಮ ತಂಡ ಬೆಂಗಳೂರಿಗೆ ತೆರಳಿ ಮುಂದಿನ 20 ದಿನಗಳ ಕಾಲ ಅವರಿಗೆ ಯಕ್ಷಗಾನ par ಕಲಿಸಿಕೊಡಲಿದೆ.- ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ

ಮನಸಿಟ್ಟು ಯಕ್ಷಗಾನ ಕಲಿಯಲು ತಿಂಗಳೆಯ ಸುಂದರ ವಾತಾವರಣ ಸಹಕಾರಿಯಾಗಿದೆ. ಇಲ್ಲಿನ ಪ್ರಾಕೃತಿಕ ವಾತಾವರಣದಲ್ಲಿ ಕಲಿಯುತ್ತಿರುವುದೇ ನಮಗೆ ಖುಷಿ. ದೇಹ ಮತ್ತು ಮನಸ್ಸಿನ ಸಮನ್ವಯತೆ ಸಾಧಿಸುವುದು ಹೇಗೆ ಎಂದು ಯಕ್ಷಗಾನ ಕಲಿಸಿದೆ. ಆಧುನಿಕ ನಟರಿಗೆ ನಿಜವಾಗಿ ಇಂತಹ ತರಬೇತಿ par ಸಿಗಬೇಕು.  -ಚಂದ್ರಿಕಾ, ಜೈಪುರ, ಪ್ರಥಮ ವರ್ಷದ  ವಿದ್ಯಾರ್ಥಿನಿ. ನಾಟಕದ ವಿದ್ಯಾರ್ಥಿಗಳಿಗೆ ಯಕ್ಷಗಾನದಿಂದ ಲಯ ಮತ್ತು ತಾಳದ ಅನುಭೂತಿಯಾಗಿದೆ. ಹೊಸ ಸಾಧನೆಯನ್ನು ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿರುವ ಆಧುನಿಕ ನಟರಿಗೆ, ನಮ್ಮ ಪೂರ್ವಜರು ಯಾವತ್ತೋ ಇದನ್ನೆಲ್ಲಾ ಮಾಡಿ ಮುಗಿಸಿದ್ದಾರೆ ಎಂಬ ಸತ್ಯದ ಅರಿವಾಗುತ್ತಿದೆ. -ವಿವೇಕ್, ಎನ್‌ಎಸ್‌ಡಿ ಶಿಕ್ಷಕ https://www.vijayavani.net/projects-need-promotion-at-departmental-level https://www.vijayavani.net/the-residence-of-the-kashi-matha-chief-at-harikhandige