ದೇವದುರ್ಗ: ಮಹಿಳೆಯರು ಗುಡಿ ಕೈಗಾರಿಕೆಗಳಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲಿ ಎಂದು ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕ ಮಾಕರ್ಂಡೇಯ ಸಲಹೆ ನೀಡಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಗುರುವಾರ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಕೌಶಲಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಹಾಗೂ ಬೆಂಗಳೂರಿನ ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾವಲಂಬಿಗಳಾದಗ ಕುಟುಂಬವನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದರು.
ಹೆಣ್ಣು ಮಕ್ಕಳು ಮೂಢನಂಬಿಕೆಗಳಿಂದ ಹೊರಬಂದು ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಮುಂದಾಗಬೇಕಿದೆ. ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಸದುಪಯೋಗಪಡೆದುಕೊಳ್ಳಬೇಕು ಎಂದರು.
ಯುಎನ್‌ಡಿಪಿ ಜಿಲ್ಲಾ ಕೋ ಆರ್ಡಿನೇಟರ್ ಶಶಿಕಾಂತ ಮಾತನಾಡಿದರು. ಸರ್ಕಾರದ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ ಹಾಗೂ ಉದ್ಯಮ ನಿರ್ವಹಣೆ ವಿಷಯ ಕುರಿತು ತರಬೇತಿ ನೀಡಲಾಯಿತು. ವ್ಯವಸ್ಥಾಪಕ ಮಧ್ವರಾಜ, ಕ್ಲಸ್ಟರ್ ಮೇಲ್ವಿಚಾರಕ ಪ್ರದೀಪ್ ಕುಮಾರ, ಶೋಭಾ ಪಾಟೀಲ್, ಮೇಲ್ವಿಚಾರಕಿ ಎನ್.ನಾಗರತ್ನ, ಭಾರ್ಗವಿ, ಪದ್ಮಾವತಿ ಇತರರಿದ್ದರು.