ಮುಂಡರಗಿ: ತಮ್ಮ ಇಳಿವಯಸ್ಸಿನಲ್ಲೂ ವೃದ್ಧ ದಂಪತಿಗಳಿಬ್ಬರು ನರೇಗಾ ಯೋಜನೆಯ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರಾಗಿ ಭಾಗವಹಿಸುವ ಮೂಲಕ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ.
ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡವಾಡ ಗ್ರಾಮದ 82 ವರ್ಷದ ಶಂಕರಪ್ಪ ಕೂಬಿಹಾಳ, 74 ವರ್ಷದ ಶಂಕರಮ್ಮ ಕೂಬಿಹಾಳ ದಂಪತಿ ಇಳಿವಯಸ್ಸಿನಲ್ಲೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸಮುದಾಯ ಬದು ನಿರ್ಮಾಣ ಕಾಮಗಾರಿ, ನಾಲಾ ಹೂಳೆತ್ತುವುದು, ಕೆರೆ ಹೂಳೆತ್ತುವ ಕಾಮಗಾರಿಗಳಲ್ಲಿ ಸುಮಾರು 10 ವರ್ಷಗಳಿಂದ ಜೊತೆಯಾಗಿ ಭಾಗವಹಿಸಿ ಯುವಜನತೆ ನಾಚುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ಮೂಲಕ ನರೇಗಾ ಕೂಲಿ ಮೊತ್ತದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತಮ್ಮ ಎರಡು ಎಕರೆ ಖುಷ್ಕಿ ಕೃಷಿಭೂಮಿಯಲ್ಲಿ, ಬೇರೆ ರೈತರ ಜಮೀನುಗಳಲ್ಲಿ ದುಡಿಯುವ ಈ ದಂಪತಿ ಬೇಸಿಗೆ ಕಾಲದಲ್ಲಿ ನರೇಗಾ ಕಾಮಗಾರಿಗಳಲ್ಲಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ.
ಇಳಿವಯಸ್ಸಿನಲ್ಲೂ ಕುಗ್ಗದ ಉತ್ಸಾಹದೊಂದಿಗೆ ಈ ಜೋಡಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರನ್ನೂ ಮದುವೆ ಮಾಡಿ ಕೊಟ್ಟಿರುವ ಈ ಹಿರಿಯ ದಂಪತಿ ಎಲ್ಲ ಕೆಲಸಗಳಲ್ಲೂ ಜೊತೆಯಾಗಿಯೇ ಹೋಗುತ್ತಾರೆ.
ದುಡಿಮೆಯೇ ಜೀವನಕ್ಕೆ ಆಧಾರ. ಬ್ಯಾಸಗಿಯೊಳಗ ನಾವು ತಪ್ಪದೆ ನರೇಗಾ ಕಾಮಗಾರಿಯಲ್ಲಿ ಭಾಗವಹಿಸುತ್ತೇವೆ. ದುಡಿತಕ್ಕ ಬಹಳ ಅನುಕೂಲ ಆಗಿದೆ. ಸುಮಾರು ಹತ್ತ ವರ್ಷದಿಂದ ನಾವು ನರೇಗಾ ಮೂಲಕ ದುಡಿಯುತ್ತಿದ್ದೇವೆ. ನರೇಗಾ ಕೆಲಸ ಇಲ್ದಾಗ ನಮ್ಮ ಹಾಗೂ ಮಂದಿ ಹೊಲದಲ್ಲಿ ಜೊತೆಯಾಗಿಯೇ ದುಡಿತಿವ್ರಿ. | ಶಂಕರಪ್ಪ ಕೂಬಿಹಾಳ, ಶಂಕರವ್ವ ಕೂಬಿಹಾಳ ನರೇಗಾ ಕೂಲಿಕಾರ್ವಿುಕ ಇಳಿವಯಸ್ಸಿನ ದಂಪತಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಾ ಅನೇಕರು ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದಾರೆ. ಗುಳೆ ಹೋಗುವುದನ್ನು ತಪ್ಪಿಸುವುದರೊಂದಿಗೆ ಇಂತಹ ಹಿರಿಯ ನಾಗರಿಕರು ಸಹ ಯೋಜನೆಯ ಕಾಮಗಾರಿ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿರುವುದು ಮಾದರಿಯಾಗಿದೆ. | ವಿಶ್ವನಾಥ ಹೊಸಮನಿ, ತಾಪಂ ಇಒ ಮುಂಡರಗಿ