ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ನರೇಗಾ ಯೋಜನೆಯ ಗ್ರಾಮಸಭೆಯಲ್ಲಿ ಪಿಡಿಒ ಮಾದೇಶ್ ಮಾತನಾಡಿದರು. ಮುತ್ತುರಾಜು, ಬೇಬಿ, ಸುಧಾ, ಚಂದ್ರಮ್ಮ, ನಾರಾಯಣ್ ಇತರರು ಇದ್ದರು.  
ಜಿಲ್ಲೆ

ನರೇಗಾಗೆ 1.63 ಕೋಟಿ ರೂ. ವೆಚ್ಚ

ಅಭಿನಯ್ ಎಚ್.ಎಂ

ಹನೂರು; ಒಂದು ವರ್ಷದ ಅವಧಿಯಲ್ಲಿ ನರೇಗಾ ಯೋಜನೆಯಡಿ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 279 ಕಾಮಗಾರಿಗಳು ನಡೆದಿದ್ದು, 1.63 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ನರೇಗಾ ತಾಲೂಕು ಸಂಯೋಜಕ ನಾರಾಯಣ್ ತಿಳಿಸಿದರು.

ತಾಲೂಕಿನ ಸೂಳೇರಿಪಾಳ್ಯ ಗ್ರಾಪಂ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯಲ್ಲಿ ಮಾತನಾಡಿದರು.

ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಕೆರೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಈ ಯೋಜನೆಯಡಿ ಸೂಳೇರಿಪಾಳ್ಯ ಗ್ರಾಪಂ ವತಿಯಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ವಸತಿ ಯೋಜನೆಗೆ ಅನುದಾನ, ಕೃಷಿ ಹೊಂಡ, ಹಳ್ಳ, ಕಾಲುವೆ ಹೂಳೆತ್ತುವ ಕಾಮಗಾರಿ. ಕೊಟ್ಟಿಗೆ ನಿರ್ಮಾಣ, ಮೆಟ್ಲಿಂಗ್ ರಸ್ತೆ, ಕೆರೆ ಅಭಿವೃದ್ಧಿ ಸೇರಿದಂತೆ 279 ಕಾಮಗಾರಿಗಳು ನಡೆದಿದ್ದು, ಕೂಲಿ ವೆಚ್ಚ 1,22,48,416 ರೂ. ಹಾಗೂ ಸಾಮಗ್ರಿ ವೆಚ್ಚ 40,61,052 ರೂ. ಸೇರಿದಂತೆ 1,63,09,468 ರೂ. ಅನುದಾನ ಖರ್ಚು ಮಾಡಲಾ ಗಿದೆ. ನಡೆದಿರುವ ಕಾಮಗಾರಿಗಳನ್ನು ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ಆದ್ದರಿಂದ ಆಕ್ಷೇಪಣೆಗಳಿದ್ದಲ್ಲಿ ಗ್ರಾಮಸ್ಥರು ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಗ್ರಾಮದ ಅಭಿವೃದ್ಧಿಗೆ ಸಹಕರಿಸಿ: ಪಿಡಿಒ ಮಾದೇಶ್ ಮಾತನಾಡಿ, ನರೇಗಾ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬ ಉದ್ಯೋಗ ಪಡೆಯಬಹುದಾಗಿದೆ. ಇದರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದ್ದು, ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಅಗತ್ಯ ಸೌಕರ್ಯ ಕಲ್ಪಿಸುವ ಸಂಬಂಧ ಸಭೆಯಲ್ಲಿ ತಿಳಿಸಿರುವ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಪಂ ಅಧ್ಯಕ್ಷ ಮುತ್ತುರಾಜು, ಉಪಾಧ್ಯಕ್ಷ ಬೇಬಿ, ಸದಸ್ಯರಾದ ಗುರು, ಸೋಮಣ್ಣ, ಸುರೇಶ್, ಮೂರ್ತಿ, ಮಹದೇವ, ಚನ್ನಯ್ಯ, ಸುಧಾ, ಚಂದ್ರಮ್ಮ, ಜ್ಯೋತಿ, ಮಹದೇವಮ್ಮ, ಬಿಆರ್‌ಸಿ ಅಶೋಕ್ ಇತರರು ಇದ್ದರು.