ಜಿಲ್ಲೆ

ನರೇಗಾ ಯೋಜನೆ ಕಾಮಗಾರಿ ಪರಿಶೀಲನೆ

ವಿವೇಕಾನಂದ ದಾಸನಕೊಪ್ಪ

ಶಿರಹಟ್ಟಿ: ಜಿಪಂ ಸಿಇಒ ಭರತ್ ಎಸ್. ಅವರು ತಾಲೂಕಿನ ಬೆಳ್ಳಟ್ಟಿ ಮತ್ತು ಮಾಚೇನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ನರೇಗಾ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ರಸ್ತೆ ಮತ್ತು ಚರಂಡಿ ಕಾಮಗಾರಿ ವೀಕ್ಷಿಸಿ, ಬಳಕೆಯಾದ ಹಣ ಹಾಗೂ ಸ್ಥಳ ಪರಿಶೀಲನೆ ನಡೆಸಿದರು. ಅಂತೆಯೇ, ನರೇಗಾ ಕಾರ್ಮಿಕರಿಗೆ ವೇತನ ನಿಗದಿತ ಸಮಯದಲ್ಲಿ ಜಮೆ ಮಾಡಬೇಕು ಎಂಬುದಾಗಿ ಅಧಿಕಾರಿಗಳಿಗೆ ಆದೇಶಿಸಿದರು.

ಸರ್ಕಾರದಿಂದ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಆಯ್ಕೆ ಮಾಡಿದ ಸ್ಥಳದಲ್ಲಿ ಮಾತ್ರ ಕಾಮಗಾರಿ ನಡೆಯಬೇಕು. ಕಾಮಗಾರಿ ಕಳಪೆಯಾದರೆ ಸಹಿಸುವುದಿಲ್ಲ ಎಂದು ಪಿಡಿಒ ಮತ್ತು ತಾಪಂ ಇಒಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಂಗನವಾಡಿ, ವಸತಿ ಶಾಲೆಗಳಿಗೆ ಭೇಟಿ: ಮಾಚೇನಹಳ್ಳಿಯ ಎಸ್ಸಿ, ಎಸ್ಟಿ ಆಶ್ರಮ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳನ್ನು ವೀಕ್ಷಿಸಿದ ಜಿಪಂ ಸಿಇಒ ಭರತ್ ಎಸ್., ಮಕ್ಕಳ ಸುರಕ್ಷತೆಗೆ ಅನುದಾನ ನೀಡಲು ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳಿಗೆ ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು ಒದಗಿಸಬೇಕು. ಅಡುಗೆ ಕೋಣೆ ಮತ್ತು ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ನಿಲಯ ಪಾಲಕರಿಗೆ ಸೂಚನೆ ನೀಡಿದರು. ಬೆಳ್ಳಟ್ಟಿ ಗ್ರಾಮದ ಅಂಗನವಾಡಿ ಕೇಂದ್ರ, ವಿದ್ಯಾರ್ಥಿ ನಿಲಯಕ್ಕೆ ಭೇಟ ನೀಡಿ ಪರಿಶೀಲನೆ ನಡೆಸಿದರು.

ತಾಪಂ ಇಒ ಆರ್.ವಿ. ದೊಡ್ಡಮನಿ, ಪಿಡಿಒ ಹನುಮಂತ ತಳವಾರ, ಸುರೇಶ ಕೆ., ಕಾರ್ಯದರ್ಶಿ ಬಸವರಾಜ ಎಸ್., ವಿಜಯಲಕ್ಷ್ಮೀ ಅಂಗಡಿ, ಮಂಜುನಾಥ ಸ್ವಾಮಿ, ತಾಂತ್ರಿಕ ಸಹಾಯಕರು, ಸಿಬ್ಬಂದಿ ಇತರರಿದ್ದರು.