ದೇವದುರ್ಗದ ತಾಪಂ ಆವರಣದಲ್ಲಿ ಜಿಪಂ ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ತಾಪಂ ಇಒ ಬಸವರಾಜ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣರಾವ್, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಅಂಗನವಾಡಿ ಮೇಲ್ವಿಚಾರಕಿ ವಿಜಯಲಕ್ಷ್ಮೀ ಇದ್ದರು. 
ಜಿಲ್ಲೆ

ನರೇಗಾ ಕಾಮಗಾರಿ ಸ್ಥಳದಲ್ಲಿ ನಾಮಫಲಕ ಕಡ್ಡಾಯ

ನರೇಶ್ ಕುಮಾರ್

ದೇವದುರ್ಗ: ಉದ್ಯೋಗ ಖಾತ್ರಿ ಯೋಜನೆಯಡಿ ಯಾವುದೇ ಕೆಲಸ ಮುಗಿದ ಬಳಿಕ ಕಾಮಗಾರಿ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಪಿಡಿಒಗಳಿಗೆ ಜಿಪಂ ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಪಂ ಸಾಮಾನ್ಯಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ 2023-24 ಹಾಗೂ 2024-25ನೇ ಸಾಲಿನ ಕಾಮಗಾರಿಗಳ ಅಗತ್ಯ ದಾಖಲೆ ಸಂಗ್ರಹಿಸಬೇಕು.

ಎನ್‌ಎಂಎಂಎಸ್ ಆ್ಯಪ್ ಮೂಲಕ ಎರಡು ಬಾರಿ ಹಾಜರಾತಿ ಹಾಕಿಸಬೇಕು. ಕೆಲಸಕ್ಕೆ ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಕೂಲಿಕಾರರಿಗೆ ಕೆಲಸ ನೀಡಬೇಕು. ಕೂಸಿನ ಮನೆಗಳು ಉತ್ತಮವಾಗಿ ನಡೆಸಬೇಕು. ಸ್ವಚ್ಛ ಭಾರತ್ ಮಿಷನ್‌ನಡಿ ನಿರ್ಮಾಣಗೊಂಡ ಶೌಚಗೃಹಗಳ ಅನುದಾನಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಲು ಸೂಚಿಸಿದರು. ಬಾಕಿ ಇರುವ ವರ್ಕ್ ಆರ್ಡರ್ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಪ್ರಸಕ್ತ ಸಾಲಿನ ನಿರ್ಬಂಧಿತ ಅನುದಾನ ಕ್ರಿಯಾ ಯೋಜನೆಯಡಿ ದೇವದುರ್ಗ ಹಾಗೂ ಅರಕೇರಾ ತಾಲೂಕಿಗೆ ಪ್ರತ್ಯೇಕವಾಗಿ ತಲಾ 23 ಲಕ್ಷ ರೂ. ಅನುದಾನ ಮಂಜೂರಾಗಿದೆ. ಶಿಕ್ಷಣ ಇಲಾಖೆಗಾಗಿ ಎರಡು ತಾಲೂಕಿಗೆ ತಲಾ 34 ಲಕ್ಷ ರೂ., ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ 45 ಲಕ್ಷ ರೂ. ಬಿಡುಗಡೆಯಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಪಂ ಇಒ ಬಸವರಾಜ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣರಾವ್, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಅಂಗನವಾಡಿ ಮೇಲ್ವಿಚಾರಕಿ ವಿಜಯಲಕ್ಷ್ಮೀ ಹಾಗೂ ವಿವಿಧ ಗ್ರಾಪಂ ಪಿಡಿಒಗಳು ಇದ್ದರು.