ಮುಂಡರಗಿ: ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹಾಗೂ ಇತರೆ ಕೆಲಸಗಳು ವಿರಳ. ಹೀಗಾಗಿ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ಜನರು ಪಡೆಯಬೇಕು. ಸಮುದಾಯ ಕಾಮಗಾರಿಗಳನ್ನು ಆರಂಭಿಸಿ ಗುಳೆ ತಪ್ಪಿಸುವುದರೊಂದಿಗೆ ಗ್ರಾಮೀಣ ಜನರ ಆರ್ಥಿಕ ಮಟ್ಟ ಸುಧಾರಿಸಲು ನರೇಗಾ ಕೊಡುಗೆ ಬಹುದೊಡ್ಡದು ಎಂದು ತಾಪಂ ಇಒ ವಿಶ್ವನಾಥ ಹೊಸಮನಿ ಹೇಳಿದರು.
ತಾಲೂಕಿನ ಬಿದರಹಳ್ಳಿ ಗ್ರಾಪಂ ವ್ಯಾಪ್ತಿಯ ಮುಂಡವಾಡ ಗ್ರಾಮದ 2025-26ನೇ ಸಾಲಿನ ನರೇಗಾ ಸಾಮೂಹಿಕ ಕಂದಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಅದೇ ಸ್ಥಳದಲ್ಲಿ ಆಯೋಜಿಸಿದ್ದ ಪಂಚಾಯತ್ ರಾಜ್ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಬೇಸಿಗೆ ಕಾಲದಲ್ಲಿ ನರೇಗಾ ಯೋಜನೆಯಡಿ ತಾಲೂಕಿನ 19 ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾ ಸಮುದಾಯ ಕಾಮಗಾರಿಗಳನ್ನು ಆರಂಭಿಸಿ ಜನರಿಗೆ ಕೆಲಸ ನೀಡುವುದರೊಂದಿಗೆ ಆರ್ಥಿಕ ಸಬಲರನ್ನಾಗಿಸಲಾಗುತ್ತದೆ. ಉದ್ಯೋಗ ಖಾತರಿ ಕೂಲಿ ಮೊತ್ತ ಏ. 1ರಿಂದ 370 ರೂ.ಗಳಿಗೆ ಏರಿಕೆಯಾಗಿದೆ. ಕೂಲಿಕಾರರು ಗ್ರಾಪಂಗೆ ಬೇಡಿಕೆ ಸಲ್ಲಿಸಿ ಕೆಲಸ ಪಡೆಯಬೇಕು. ಉದ್ಯೋಗ ಖಾತರಿ ಯೋಜನೆಯಡಿ ವರ್ಷಕ್ಕೆ 100 ದಿನ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ನರೇಗಾ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ಗ್ರಾಪಂ ಸಿಬ್ಬಂದಿ ಹಾಗೂ ಕೂಲಿಕಾರ್ವಿುಕರು ಉಪಸ್ಥಿತರಿದ್ದರು.