ಮಂಡ್ಯ: ಕಳೆದ ಆರು ತಿಂಗಳ ವೇತನ ಪಾವತಿಸಲು ಸೂಚನೆ ನೀಡುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶಾಸಕ ರವಿಕುಮಾರ್ ಗಣಿಗ ಅವರಿಗೆ ಮನವಿ ಸಲ್ಲಿಸಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿದ ಸಂಘದ ಪದಾಧಿಕಾರಿಗಳು, ಮನವಿ ಸಲ್ಲಿಸಿದರು. ರಾಜ್ಯಾದ್ಯಂತ 3,632 ನೌಕರರು ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಉದ್ಯೋಗಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಭಾಗಿಯಾಗಿದ್ದೇವೆ. ಆದರೆ, ನೌಕರರಿಗೆ ಕಳೆದ ಜನವರಿಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿಲ್ಲ. ಇದರಿಂದ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚ, ಪ್ರಯಾಣವೆಚ್ಚ, ಸಾಲಗಳ ಮರುಪಾವತಿ, ಇಎಂಐ ಸೇರಿದಂತೆ ಅನೇಕ ಖರ್ಚುಗಳನ್ನು ನಿಭಾಯಿಸಲು ತೊಂದರೆ ಉಂಟಾಗುತ್ತಿದೆ ಎಂದು ಅಳಲು ವ್ಯಕ್ತಪಡಿಸಿದರು.
ಪ್ರತಿಯೊಬ್ಬ ನೌಕರರು ಒಂದೊಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದಾರೆ. ವೇತನ ಪಾವತಿಯಾಗದಿದ್ದರೆ ನೌಕರರ ಆರ್ಥಿಕ ಪರಿಸ್ಥಿತಿ, ಮನೋಬಲ, ಆತ್ಮಸ್ಥೈರ್ಯ ಮತ್ತಷ್ಟು ಕುಸಿಯಲಿದೆ. ಬಾಕಿ ವೇತನ ಪಾವತಿ ವಿಚಾರವಾಗಿ ಮೇಲಧಿಕಾರಿಗಳು ಕೇಂದ್ರಸರ್ಕಾರದಿಂದ ಅನುದಾನ ಬಂದಿಲ್ಲವೆಂದು ಇಲ್ಲಿಯವರೆಗೆ ಮಾಹಿತಿ ನೀಡುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಿದೆ. ರಾಜ್ಯದಿಂದ ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ. ಆದರೆ, ಹೊಸ ತಂತ್ರಾಂಶದಲ್ಲಿ ವೇತನ ಪಾವತಿ ಮಾಡಲು ತಾಂತ್ರಿಕ ಸಮಸ್ಯೆ ಬಗೆಹರಿಯದೆ ಇರುವುದರಿಂದ ವೇತನ ಪಾವತಿ ವಿಳಂಬವಾಗುತ್ತಿದೆಂದು ಹೇಳುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ಶಾಸಕರು, ನೌಕರರ ನೋವಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ.
ನರೇಗಾ ನೌಕರರ ಕೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ತಾಂತ್ರಿಕ ಸಹಾಯಕರಾದ ಭರತ್, ಶಾಂತಮೂರ್ತಿ, ಚೇತನ್, ಮೋಹನ್, ನವೀನ್, ಸುರೇಶ್, ಐಇಸಿ ಆಶಾ, ಕಿರಣ್, ಸಂಧ್ಯಾ ಇತರರಿದ್ದರು.