| ಅಭಿಲಾಷ್ ತಿಟ್ಟಮಾರನಹಳ್ಳಿ, ಚನ್ನಪಟ್ಟಣ
ಕರೊನಾ ಸಂಕಷ್ಟದಲ್ಲಿ ಗ್ರಾಮೀಣರ ಅನುಕೂಲಕ್ಕೆಂದು ಸರ್ಕಾರ ನರೇಗಾ ಯೋಜನೆ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೆ, ಈ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ. ಜತೆಗೆ ಭ್ರಷ್ಟರ ಪಾಲಿಗೆ ಮೃಷ್ಟಾನ್ನವಾಗಿದೆ ಎಂಬ ಆರೋಪ ವ್ಯಾಪಕವಾಗಿದೆ.
ರೈತರಿಗೆ ಮೀನು ಸಾಕಾಣಿಕೆ ಕೊಳ ನಿರ್ಮಿಸಿಕೊಳ್ಳಲು ಯೋಜನೆಯಡಿ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಕೊಳ ನಿರ್ಮಾಣಕ್ಕಾಗಿ ಮೀನುಗಾರಿಕೆ ಇಲಾಖೆ ನೀಡುವ ಶಿಫಾರಸು ಅಥವಾ ದೃಢೀಕರಣ ಪತ್ರಗಳನ್ನು ಹಣಕ್ಕಾಗಿ ಮಾರಾಟ ಮಾಡಿಕೊಳ್ಳಲಾಗುತ್ತಿದೆ.
ಮಧ್ಯವರ್ತಿಗಳ ಹಾವಳಿ ಜೋರು: ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಮೀನುಕೊಳ ನಿರ್ಮಿಸಲು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಂದ ಫಲಾನುಭವಿ ದೃಢೀಕರಣ ಅಥವಾ ಶಿಫಾರಸು ಪತ್ರ ತರಬೇಕು. ಆದರೆ, ಇಲಾಖೆಯ ಮೊಹರಿನೊಂದಿಗೆ ಬರುವ ಈ ದೃಢೀಕರಣ ಪತ್ರಗಳು ಕೆಲವು ಮಧ್ಯವರ್ತಿಗಳ ಪಾಲಾಗುತ್ತಿವೆ. ಅವರು ಪತ್ರಗಳನ್ನು ಬಿಕರಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಫಲಾನುಭವಿ ಕಡೆಯ ಚಾಲಾಕಿ ವ್ಯಕ್ತಿಗಳು ದೃಢೀಕರಣ ಪತ್ರಕ್ಕೆ ಅವರ ನಕಲಿ ಸಹಿಗಳನ್ನು ಮಾಡಿ ಗ್ರಾಪಂಗೆ ಸಲ್ಲಿಸುತ್ತಿದ್ದಾರೆ. ಇಂಥ ನಕಲಿ ದೃಢೀಕರಣ ಪತ್ರವನ್ನು ತಾಲೂಕಿನ ಕೋಡಂಬಳ್ಳಿ ಗ್ರಾಪಂಗೆ ಸಲ್ಲಿಸಿರುವ ಉದಾಹರಣೆಯೂ ಇದೆ.
ನಕಲಿ ಸಹಿ ಮಾಡಿ ಹಣ ಲೂಟಿ:ಕೋಡಂಬಳ್ಳಿಯ ಇಬ್ಬರು ರೈತರು ಈ ಯೋಜನೆಯ ಲಾಭ ಪಡೆಯಲು ನೀಡಿರುವ ಶಿಫಾರಸು ಪತ್ರದಲ್ಲಿ ಒಬ್ಬನೇ ಅಧಿಕಾರಿಯ ಸಹಿ ಬೇರೆ ಬೇರೆ ರೀತಿಯಲ್ಲಿವೆ. ಯೋಜನೆಯಡಿ ಮೀನುಕೊಳ ನಿರ್ಮಿಸಿಕೊಳ್ಳಲು 1.20 ಲಕ್ಷ ರೂ. ನೀಡಲಾಗುತ್ತದೆ. ಹಣ ಲಪಟಾಯಿಸುವ ದುರುದ್ದೇಶದಿಂದ ದೃಢೀಕರಣ ಪತ್ರದಲ್ಲಿ ಲಾನುಭವಿಯ ನಕಲಿ ಸಹಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಿಂದಾಗಿ ಮೀನುಗಾರಿಕೆಯ ಮೊಹರು ಇರುವ ದೃಢೀಕರಣಪತ್ರಗಳನ್ನು ಸೃಷ್ಟಿಸುವ ಬೃಹತ್ ಜಾಲ ಸಕ್ರಿಯವಾಗಿದೆ ಎಂಬುದು ಸಾಬೀತಾಗಿದೆ.
ಪರಿಶೀಲಿಸದ ಅಧಿಕಾರಿಗಳು: ಮೀನುಕೊಳ ನಿರ್ಮಾಣಕ್ಕೆ ಶಿಾರಸು/ದೃಢೀಕರಣ ಪತ್ರ ನೀಡುವ ಮೊದಲು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಮೀನುಕೊಳ ನಿರ್ಮಾಣಕ್ಕೆ ಆ ಸ್ಥಳ ಯೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರದಲ್ಲಿ ಶಿಾರಸು/ದೃಢೀಕರಣ ಪತ್ರ ಕೊಡಬೇಕು. ಆದರೆ, ಅಧಿಕಾರಿಗಳು ಸ್ಥಳ ಪರಿಶೀಲಿಸಲು ಮುಂದಾಗುತ್ತಿಲ್ಲ. ಇದು ಮಧ್ಯವರ್ತಿಗಳ ಪಾಲಿಗೆ ಭಾರಿ ಲಾಭದಾಯಕವಾಗಿ ಮಾರ್ಪಟ್ಟಿದೆ. ಜತೆಗೆ ನಕಲಿ ಶಿಾರಸು/ದೃಢೀಕರಣಪತ್ರ ಸೃಷ್ಟಿಸಲು ಅನುಕೂಲವಾಗಿದೆ.
ಭಾರಿ ಗೋಲ್ಮಾಲ್ ಸಾಧ್ಯತೆ? : ಕಳೆದ ವರ್ಷ ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿರುವ ಕೆಲ ಫಲಾನುಭವಿಗಳು ಅದೇ ಹೊಂಡವನ್ನು ಮಾರ್ಪಡಿಸಿ, ಇದನ್ನೇ ಮೀನುಕೊಳವಾಗಿ ಪರಿವರ್ತಿಸಿ ಹಣ ಲಪಟಾಯಿಸಲು ಮುಂದಾಗಿದ್ದಾರೆ. ಇದಕ್ಕೆ ಕೆಲವು ಮದ್ಯವರ್ತಿಗಳು ಸಾಥ್ ನೀಡುತ್ತಿದ್ದಾರೆ ಎಂಬ ಮಾತುಗಳು ಇವೆ. ಒಟ್ಟಾರೆ, ಮೀನುಕೊಳ ನಿರ್ಮಾಣದ ವಿಷಯದಲ್ಲಿ ಸೃಷ್ಟಿಯಾಗುತ್ತಿರುವ ಶಿಾರಸು/ದೃಢೀಕರಣ ಪತ್ರಗಳ ವಿಷಯ ತನಿಖೆಯಿಂದ ಮಾತ್ರ ಬಹಿರಂಗವಾಗಲು ಸಾಧ್ಯವಾಗಲಿದೆ. ಆದ್ದರಿಂದ ಈ ಬಗ್ಗೆ ತಕ್ಷಣವೇ ತನಿಖೆ ಆರಂಭಿಸಬೇಕು. ಇಲ್ಲವಾದಲ್ಲಿ ಸರ್ಕಾರದ ಯೋಜನೆಯೊಂದು ಭ್ರಷ್ಟರ ಪಾಲಾಗುವುದು ನಿಶ್ಚಿತ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕೋಡಂಬಳ್ಳಿ ಗ್ರಾಪಂಗೆ ಸಲ್ಲಿಕೆಯಾಗಿರುವ ಎರಡು ದೃಢೀಕರಣ ಪತ್ರಗಳಲ್ಲಿನ ಸಹಿ ನನ್ನದಲ್ಲ. ಈ ಪತ್ರಗಳು ನಕಲಿಯಾಗಿವೆ. ಕಚೇರಿಯ ಮೊಹರು ಬಳಸಿಕೊಂಡು ದೃಢೀಕರಣಪತ್ರ ತಯಾರಿಸಿಕೊಳ್ಳಲಾಗಿದೆ. ಈ ಬಗ್ಗೆ ಗ್ರಾಪಂಗೆ ಪತ್ರ ರವಾನಿಸಿದ್ದೇನೆ. ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮಹಂತೇಶ್, ಚನ್ನಪಟ್ಟಣ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ