ಜಿಲ್ಲೆ

ಗುಳೆ ತಪ್ಪಿಸಲು ನರೇಗಾ ಅನುಕೂಲ

Gadag - Desk - Tippanna Avadoot

ಲಕ್ಷ್ಮೇಶ್ವರ: ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಉದ್ಯೋಗ ನೀಡಿ ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಜನರಿಗೆ ಯೋಜನೆ ವರದಾನವಾಗಿದೆ ಪ್ರತಿ ಕಾರ್ವಿುಕರಿಗೆ ದಿನಕ್ಕೆ 370 ರೂ. ಪಾವತಿಸಲಾಗುತ್ತದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದರು.

ಸಮೀಪದ ದೊಡ್ಡೂರ ಗ್ರಾಮದ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದರು.

ಕೆರೆ ಹೂಳೆತ್ತುವುದರಿಂದ ಅಂತರ್ಜಲಮಟ್ಟ ಹೆಚ್ಚಾಗಲಿದೆ. ಕೊಳವೆ ಬಾವಿಗಳಲ್ಲಿ ನೀರಿನ ಏರಿಕೆ ಆಗಲಿದೆ. ಗ್ರಾಮಸ್ಥರು ತಮ್ಮ ಗ್ರಾಮದ ಕೆರೆಯ ಸಂರಕ್ಷಣೆಗೆ ಒತ್ತು ಕೊಡುವಂತೆ ಸಲಹೆ ನೀಡಿದರು.

ನರೇಗಾ ಗ್ರಾಮೀಣ ಜನರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ನರೇಗಾ ಯೋಜನೆಯಲ್ಲಿ ಕೆಲಸ ಒದಗಿಸಿ ಸ್ವಾವಲಂಬಿಗಳಾಗಿ ಮಾಡಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ 60 ದಿನ ಕೆಲಸ ಪಡೆದು ಗರಿಷ್ಠ 22,200 ರೂ. ಗಳಿಕೆ ಮಾಡಬಹುದು. ಇದರಿಂದ ರೈತರು ತಮ್ಮ ಕುಟುಂಬದ ಅಗತ್ಯತೆಗೆ ಅನುಕೂಲವಾಗಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದ ಜನರು ಸ್ವಂತ ಊರಲ್ಲೇ ಕೂಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ದೊಡ್ಡೂರ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಈಳಗೇರ, ಗ್ರಾಪಂ ಸದಸ್ಯ ಮಲ್ಲೇಶ ಮಣ್ಣಮ್ಮನವರ, ಪ್ರಮುಖರಾದ ನಾನಪ್ಪ ಲಮಾಣಿ, ಗ್ರಾಪಂ ಕಾರ್ಯದರ್ಶಿ ಆರ್.ಕೆ. ಗುರುವಿನ, ಬಿಎಫ್​ಟಿ ತೀರಕಪ್ಪ ಲಮಾಣಿ, ಮಲ್ಲಿಕಾರ್ಜುನ ತಳವಾರ ಇತರರಿದ್ದರು.