ನರಗುಂದ: ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆಗೆ ನ್ಯಾಷನಲ್ ಕ್ವಾಲಿಟಿ ಅಶ್ಯುರೆನ್ಸ್ ಸ್ಟ್ಯಾಂಡರ್ಡ್ (ಎನ್‌ಕ್ಯೂಎಎಸ್) ಸದಸ್ಯರು ಸೋಮವಾರ ಭೇಟಿ ನೀಡಿ, ಆಸ್ಪತ್ರೆಯ 9 ವಿಭಾಗಗಳಲ್ಲಿನ ಸ್ವಚ್ಛತೆ, ಚಿಕಿತ್ಸೆ, ಕೊಠಡಿ, ಯಂತ್ರೋಪಕರಣಗಳ ಮೌಲ್ಯಮಾಪನ, ಪರಿಶೀಲನೆ ಕೈಗೊಂಡರು.
ರಾಷ್ಟ್ರೀಯ ಮೌಲ್ಯಮಾಪನ ಅಧಿಕಾರಿ ಡಾ. ಸಂಪತ್‌ಸಿಂಗ್ ರಂಗೇವಾಲೆ ನೇತೃತ್ವದ 5 ಅಧಿಕಾರಿಗಳ ತಂಡವು, ಆಸ್ಪತ್ರೆಯಲ್ಲಿನ ಒಪಿಡಿ, ಐಪಿಡಿ, ರೇಡಿಯೋಲಾಜಿ, ತುರ್ತು ಶಸ್ತ್ರ ಚಿಕಿತ್ಸಾ ಕೊಠಡಿ ಸೇರಿ ಒಟ್ಟು 9 ವಿಭಾಗಗಳ ಪರಿಶೀಲನೆ ನಡೆಸಿದರು.
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಆರೋಗ್ಯದ ಗುಣಾತ್ಮಕತೆ, ವಿವಿಧ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಲು 8 ವೈದ್ಯರ ತಂಡ ನೇಮಿಸಲಾಗಿದೆ. ಬೆಳಗಾವಿ ವಿಭಾಗದ 32 ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಉಚಿತ ಆರೋಗ್ಯ ನೀಡುತ್ತಿರುವ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ಸರ್ಕಾರ ನಿರ್ದೇಶನದಂತೆ ಒಂದು ತಿಂಗಳಿನಲ್ಲಿ ಗದಗ ಜಿಲ್ಲೆಯ 7 ಸರ್ಕಾರಿ ಆಸ್ಪತ್ರೆಗಳಲ್ಲಿ ಪರಿಶೀಲನೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ತಿಳಿಸಿದರು.
ಮೌಲ್ಯಮಾಪನ ಪರಿಶೀಲನಾ ತಂಡದ ಡಾ. ಅವಿನಾಶ, ಡಾ. ವೀರೇಶ, ಡಾ .ಸುಜಾತಾ, ತಾಲೂಕು ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ರಾಜೇಶ ಟಿ.ಎಸ್., ಡಾ. ನಿರ್ಮಲಾ ಹಂಜಿ, ಕಿರಣ ಜೋಶಿ, ಭಾರತಿ ಪಾಟೀಲ, ಪ್ರಶಾಂತ ಕುಲಕರ್ಣಿ, ಶಂಕರ ಯಂಡಿಗೇರಿ, ಶಕೀಲ ಘನಿ, ಸಂತೋಷ ಡೊಂಬರ, ಸಂಜಯ ಚವ್ಹಾಣ ಇತರರಿದ್ದರು.